ಒಂದೂವರೆ ವರ್ಷಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಮುಸ್ಲಿಮರಿಗೆ ನೀಡಿರುವ ಸಾಲ ಕೇವಲ ಶೇ.2
ಮುಂಬೈ,ಮಾ.14: ಕಳೆದ ಒಂದೂವರೆ ವರ್ಷಗಳಲ್ಲಿ (1-4-2014 ರಿಂದ 30-9-2015) ಮುಂಬೈನ ಆರು ರಾಷ್ಟ್ರೀಕೃತ ಬ್ಯಾಂಕುಗಳ ಆದ್ಯತಾ ಕ್ಷೇತ್ರದ ಸಾಲಗಳಲ್ಲಿ ಮುಸ್ಲಿಮರಿಗೆ ದಕ್ಕಿದ್ದು ಶೇ.2 ಮಾತ್ರ. ಸ್ಥಳೀಯ ಮಾಹಿತಿ ಹಕ್ಕು ಕಾರ್ಯಕರ್ತ ಎಂ.ಎ.ಖಾಲಿದ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಈ ಬ್ಯಾಂಕುಗಳಿಂದ ಪಡೆದುಕೊಂಡಿರುವ ಮಾಹಿತಿ ಇದು. ಇದೀಗ ಬಯಲಾಗಿರುವ ಈ ವಿಷಯ ಎನ್‌ಡಿಎ ಆಡಳಿತದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಮುಸ್ಲಿಮ್ ಸಮುದಾಯದ ಭಾವನೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದು.
ಮುಸ್ಲಿಮರಿಗೆ ಸಾಲಗಳನ್ನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲವಾದರೂ ಒಟ್ಟೂ ಆದ್ಯತಾ ಕ್ಷೇತ್ರದ ಸಾಲಗಳ ಶೇ.15ರಷ್ಟು ಮುಸ್ಲಿಮ್ ಸಮುದಾಯಕ್ಕೆ ದೊರೆಯಬೇಕು ಎನ್ನುವುದನ್ನು ಬ್ಯಾಂಕುಗಳು ಒಪ್ಪಿಕೊಂಡಿವೆ. 2011ರ ಜನಗಣತಿಯಂತೆ ಭಾರತದ 121.09 ಕೋಟಿ ಜನಸಂಖ್ಯೆಯಲ್ಲಿ ಶೇ.14.2(17.22 ಕೋಟಿ) ಮುಸ್ಲಿಮರಿದ್ದಾರೆ. ಬ್ಯಾಂಕ್ ಸಾಲಗಳಲ್ಲಿ ತಮ್ಮ ಸಮುದಾಯದ ಪಾಲು ಇನ್ನೂ ಅಧಿಕವಿರಬೇಕು ಎನ್ನುವುದು ಮುಸ್ಲಿಮ್ ಸಮುದಾಯದ ಪ್ರತಿನಿಧಿಗಳ ಅಭಿಪ್ರಾಯವಾಗಿದೆ.
ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್,ಅಲಹಾಬಾದ್ ಬ್ಯಾಂಕ್,ಕಾರ್ಪೊರೇಷನ್ ಬ್ಯಾಂಕ್,ಬ್ಯಾಂಕ್ ಆಫ್ ಮಹಾರಾಷ್ಟ್ರ,ವಿಜಯ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್‌ಗಳಿಂದ ಖಾಲಿದ್ ಈ ಮಾಹಿತಿಗಳನ್ನು ಪಡೆದುಕೊಂಡಿದ್ದು, ಈ ಪೈಕಿ ಆಲಹಾಬಾದ್ ಬ್ಯಾಂಕ್ ಮಾತ್ರ ತೃಪ್ತಿಕರವೆನ್ನಬಹುದಾದ ಪ್ರಮಾಣದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸಾಲಗಳನ್ನು ನೀಡಿದೆ. ಆದ್ಯತಾ ಕ್ಷೇತ್ರದಲ್ಲಿ ಬ್ಯಾಂಕಿನ ಸಾಲಗಳಲ್ಲಿ ಮುಸ್ಲಿಮರ ಪಾಲು 2015,ಮಾ.31ಕ್ಕೆ ಶೇ.7.07 ಇದ್ದುದು 2015,ಸೆ.30ಕ್ಕೆ 7.19ಕ್ಕೆ ಏರಿಕೆಯಾಗಿದೆ ಎಂದು ಅದು ತನ್ನ ಉತ್ತರದಲ್ಲಿ ತಿಳಿಸಿದೆ. ಮುಸ್ಲಿಮರಿಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಾಲ ನೀಡಿರುವುದು ಕಾರ್ಪೊರೇಷನ್ ಬ್ಯಾಂಕ್. 2015,ಮಾ.31ಕ್ಕೆ ಈ ಪ್ರಮಾಣ ಶೇ.1.90 ಇದ್ದುದು 2015,ಸೆ.30ಕ್ಕೆ ಶೇ.1.95ಕ್ಕೆ ಹೆಚ್ಚಿದೆ.
ಆದ್ಯತಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಸಾಲಗಳಲ್ಲಿ ಮುಸ್ಲಿಮರ ಪಾಲನ್ನು ಹೆಚ್ಚಿಸಲು ಯಾವುದೇ ಹೆಚ್ಚುವರಿ ಪ್ರಯತ್ನಗಳು ನಡೆಯುತ್ತಿಲ್ಲ ಎನ್ನುವುದನ್ನು ಈ ಮಾಹಿತಿಗಳು ತೋರಿಸುತ್ತಿವೆ. ಇದು ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ’ಭರವಸೆ ಎಷ್ಟು ಪೊಳ್ಳು ಎನ್ನುವುದನ್ನು ಬಯಲಾಗಿಸಿದೆ ಎಂದು ಖಾಲಿದ್ ಹೇಳಿದರು.
ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳ ಕೊರತೆ ಮುಸ್ಲಿಮರ ಆರ್ಥಿಕ ಪ್ರತ್ಯೇಕತೆಗೆ ಕಾರಣಗಳಲ್ಲೊಂದು ಎನ್ನುವುದು ಎರಡು ವರ್ಷಗಳ ಹಿಂದೆ ನಡೆದ ಸಮೀಕ್ಷೆಯೊಂದು ಬೆಟ್ಟು ಮಾಡಿತ್ತು ಎಂದು ಟಾಟಾ ಸಮಾಜ ವಿಜ್ಞಾನ ಸಂಸ್ಥೆಯ ಉಪ ನಿರ್ದೇಶಕ ಡಾ.ಅಬ್ದುಲ್ ಶಬಾನ್ ಹೇಳಿದರು.
ಬಹಳಷ್ಟು ಮುಸ್ಲಿಮ್ ಬಾಹುಳ್ಯದ ಪ್ರದೇಶಗಳನ್ನು ಕೆಲವು ಬ್ಯಾಂಕುಗಳು ‘ನಕಾರಾತ್ಮಕ’ ಅಥವಾ ‘ಕೆಂಪು ವಲಯ’ಎಂದು ಗುರುತಿಸಿದ್ದು, ಅಲ್ಲಿ ಸಾಲಗಳನ್ನು ನೀಡಲು ಅವು ಹಿಂಜರಿಯುತ್ತಿವೆ ಎಂದು ಸಾಚಾರ್ ವರದಿಯು ಅಭಿಪ್ರಾಯ ವ್ಯಕ್ತಪಡಿಸಿತ್ತು. ಹೆಚ್ಚಿನ ಮುಸ್ಲಿಮರು ಸ್ವ ಉದ್ಯೋಗಿಗಳಾಗಿರುವುದರಿಂದ ಬಾಂಕುಗಳಿಂದ ಸಾಲ ನೀಡಿಕೆ ಹೆಚ್ಚಿದರೆ ಅವರು ಆರ್ಥಿಕವಾಗಿ ಬಲಗೊಳ್ಳಲು ನೆರವಾಗುತ್ತದೆ ಎಂದೂ ಅದು ಹೇಳಿತ್ತು.