×
Ad

ಮಂಗಳೂರು: ಮರಳು ಸಮಸ್ಯೆ ನಿವಾರಿಸಲು ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಸಚಿವ ರೈ ನಿರ್ದೇಶನ

Update: 2016-03-14 19:56 IST

ಮಂಗಳೂರು, ಮಾ.14: ದ.ಕ. ಜಿಲ್ಲೆಯ ಜನಸಾಮಾನ್ಯರನ್ನು ಕಾಡುತ್ತಿರುವ ಮರಳಿನ ಅಭಾವದ ಸಮಸ್ಯೆ ಇಂದು ಜಿಲ್ಲಾಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ ತ್ರೈಮಾಸಿಕ ಸಮೀಕ್ಷಾ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆಯೇ ವಿಷಯ ಮರಳಿನ ವಿಷಯ ಪ್ರಸ್ತಾಪಿಸಿದ ಶಾಸಕ ಜೆ.ಆರ್ ಲೋಬೋ, ಜಿಲ್ಲೆಯಲ್ಲಿ ಮರಳಿನ ಸಮಸ್ಯೆಯಿಂದಾಗಿ ಜನಪ್ರತಿನಿಧಿಗಳು ಜನರಿಗೆ ಉತ್ತರ ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ಕಾಮಗಾರಿಗಳು ಕುಂಠಿತವಗಿದೆ. ಜನವರಿ 14ರಿಂದ ಇಂದಿನವರೆಗೆ ಮರಳು ಪೂರೈಕೆಯಾಗುತ್ತಿಲ್ಲ. ಸಿಆರ್‌ಝೆಡ್‌ನಡಿ ಮರಳುಗಾರಿಕೆಗೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ದೊರೆಯಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ನಾವು ತ್ರಿಶಂಕು ಸ್ಥಿತಿಯಲ್ಲಿದ್ದೇವೆ ಎಂದು ಆಕ್ಷೇಪಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪೂರಕವಾಗಿ ಮಾತನಾಡುತ್ತಾ, ಬೆಂಗಳೂರು ಮತ್ತು ಕೇರಳಕ್ಕೆ ನಿರಂತರವಾಗಿ ಸಾಗುತ್ತಿದೆ. ಆದರೆ ನಮಗೆ ಮಾತ್ರ ಮರಳು ಇಲ್ಲ ಎಂದರು.

ಸಚಿವ ರೈ ಪ್ರತಿಕ್ರಿಯಿಸುತ್ತಾ, ಮರಳಿನ ಸಮಸ್ಯೆ ರಾಜ್ಯಾದ್ಯಂತ ಇದೆ. ಜಿಲ್ಲೆಯಲ್ಲಿ ಸಿಆರ್‌ಝೆಡ್ ಹಾಗೂ ಸಿಆರ್‌ಝೆಡೇತರ ವಲಯ ಎಂಬ ಭಿನ್ನವಾದ ಸ್ಥಿತಿ ಇದೆ. ಸಿಆರ್‌ಝೆಡ್‌ನಡಿ ಮರಳುಗಾರಿಕೆಗೆ ಅನುಮತಿಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿಗಾಗಿ ಅರ್ಜಿ ಸಲ್ಲಿಸುವಲ್ಲಿ ಆಗಿರುವ ವಿಳಂಬದಿಂದಾಗಿ ತೊಂದರೆಯಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಏಕರೂಪದ ಮರಳು ನೀತಿಗಾಗಿ ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಸಿಆರ್‌ಝೆಡೇತರ ಇರುವ ಕಾನೂನನ್ನು ಊರ್ಜಿತ ಮಾಡಿ ಕ್ರಮಕ್ಕೆ ಮುಂದಾಗಲಾಗಿದೆ. ಈ ನಡುವೆ ನಮ್ಮ ಮೇಲೆ ಮರಳು ಮಾಫಿಯಾ, ಅಕ್ರಮ ಮರಳುಗಾರಿಕೆಯ ಆರೋಪವೂ ಇರುವುದರಿಂದ ಕಾನೂನು ಬದ್ಧವಾಗಿಯೇ ಕ್ರಮಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

2500 ರೂ.ಗಳ ಮರಳು ಜಿಲ್ಲೆಯಿಂದ ಬೇರೆಡೆಗೆ 15,000 ರೂ.ಗಳಿಗೆ ಸಾಗಾಟವಾಗುತ್ತಿದೆ. ಇಲ್ಲಿನ ಅಧಿಕಾರಿಗಳ ಮೂಲಕವೇ ಸಾಗಾಟ ನಡೆಯುತ್ತಿದೆ ಎಂದು ಆರೋಪಿಸಿದ ಶಾಸಕ ಜೆ.ಆರ್. ಲೋಬೋ, ಜಿಲ್ಲೆಯ ಮರಳಿನ ಸಮಸ್ಯೆಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮಾತನಾಡಿ, ಜಿಲ್ಲೆಯಲ್ಲಿ ಸಿಆರ್‌ಝೆಡೇತರ 38 ಬ್ಲಾಕ್‌ಗಳನ್ನು ಗುರುತಿಸಿ, 37 ಬ್ಲಾಕ್‌ಗಳಲ್ಲಿ ಮರುಳುಗಾರಿಕೆಗೆ ಅವಕಾಶ ನೀಡಿ ಜನವರಿಯಲ್ಲಿ ಟೆಂಡರ್ ಕರೆಯಲಾಗಿತ್ತು. ಟೆಂಡರ್ ನಿಯಮ ಕಠಿಣವಾಗಿದ್ದ ಕಾರಣ ಯಾರು ಟೆಂಡರ್ ಹಾಕಿರಲಿಲ್ಲ. ಮತ್ತೆ ಫೆ. 29ರಿಂದ ಟೆಂಡರ್ ಆರಂಭಿಸಿ 22 ಗುತ್ತಿಗೆದಾರರಿಗೆ ಮರಳು ತೆಗೆಯಲು ಇಂದು ಅಥವಾ ಔಪಚಾರಿಕ ಆದೇಶ ದೊರೆಯಲಿದೆ. ಇದೇ ವೇಳೆ ಮನಪಾ ವ್ಯಾಪ್ತಿಯ ಸರಕಾರಿ ನಿರ್ಮಾಣ ಕಾಮಗಾರಿಗಳಿಗೆ ಅರ್ಕುಳ ಬ್ಲಾಕ್, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಉಪ್ಪಿನಂಗಡಿ ಬ್ಲಾಕ್ ಹಾಗೂ ಪಿಡಬ್ಲುಡಿಗೆ ಕೂಡಾ ಪ್ರತ್ಯೇಕ ಬ್ಲಾಕ್ ನಿಗದಿಪಡಿಸಲಾಗಿದೆ. ಉಳಿದಂತೆ 29 ಬ್ಲಾಕ್‌ಗಳಿಗೆ ಮತ್ತೆ ಶಾರ್ಟ್ ಟೆಂಡರ್ ಕರೆಯಲಾಗಿದ್ದು, ಮಾರ್ಚ್ 23 ಕೊನೆಯ ದಿನವಾಗಿದೆ. ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಆದರೆ ಈ ಉತ್ತರದಿಂದ ತೃಪ್ತರಾಗದ ಐವನ್ ಡಿಸೋಜಾ ಹಾಗೂ ಜೆ.ಆರ್. ಲೋಬೋ, ಮಾ. 23ರವರೆಗಿನ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸಭೆಯಲ್ಲಿ ನಿರ್ಧಾರ ಪ್ರಕಟಿಸಬೇಕೆಂದು ಒತ್ತಾಯಿಸಿದರಲ್ಲದೆ, ಇಲ್ಲವಾದಲ್ಲಿ ಸಭೆ ಬಹಿಷ್ಕರಿಸುವುದಾಗಿ ಸಭೆಯಿಂದ ಹೊರ ನಡೆಯಲು ಮುಂದಾದರು. ಸಭೆಯಲ್ಲಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್ ಕೂಡಾ ಪರ್ಯಾಯ ವ್ಯವಸ್ಥೆಗೆ ಸಭೆಯಲ್ಲೇ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸಂದರ್ಭ ಸಚಿವ ರೈ, ಕಾನೂನು ರೀತಿಯಲ್ಲಿ ಅಕ್ರಮ ಮರಳುಗಾರಿಕೆಗೆ ಅವಕಾಶ ಇಲ್ಲದಂತೆ ಜಿಲ್ಲೆಯ ಮರಳು ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಧಿಕಾರಿ ಅವರು ಇಂದೇ ಸಂಬಂಧಪಟ್ಟವರ ಸಭೆ ನಡೆಸಿ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಕುಡಿಯುವ ನೀರು: ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಗೆ ಸೂಚನೆ

ಕುಡಿಯುವ ನೀರಿನ ತುರ್ತು ಕೆಲಸಗಳಿಗೆ ಹಣಕಾಸಿನ ಸಮಸ್ಯೆ ಇಲ್ಲ. ಆದ್ಯತೆ ನೆಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ಟಾಸ್ಕ್ ಪೋರ್ಸ್ ಸಭೆ ಕರೆದು ನೀರಿನ ಅಗತ್ಯವಿದ್ದಲ್ಲಿ ಜಿಲ್ಲಾಧಿಕಾರಿ ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ರೈ ನಿರ್ದೇಶನ ನೀಡಿದರು.

ಜಿ.ಪಂ.ನ ನಾಮ ನಿರ್ದೇಶಿತ ಸದಸ್ಯ ಅಲ್ವಿನ್ ಡಿಸೋಜ ಮಾತನಾಡಿ 94 ಸಿಯಡಿ ಹಕ್ಕುಪತ್ರ ನೀಡಿಕೆ ಕಾರ್ಯ ನಡೆಯುತ್ತಿಲ್ಲ. ಕಳೆದ ಕೆಡಿಪಿ ಸಭೆಯಲ್ಲಿ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರೂ ಯಾವುದೇ ಪ್ರಗತಿ ಆಗಿಲ್ಲ ಎಂದು ದೂರಿದರು.

ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 94 ಸಿಯಡಿ ಗ್ರಾಮಾಂತರ ಪ್ರದೇಶಗಳಲ್ಲಿ 54393 ಅರ್ಜಿಗಳು ಸ್ವೀಕೃತವಾಗಿವೆ. ಇವುಗಳಲ್ಲಿ 7837 ಅರ್ಜಿಗಳು ತೀರ್ಮಾನವಾಗಿವೆ. 94ಸಿಸಿಯಡಿ ನಗರದ ಪ್ರದೇಶದಲ್ಲಿ ಮನೆ ಅಡಿ ಸಕ್ರಮೀಕರಣಕ್ಕೆ ಕೇರಿ 1636 ಅರ್ಜಿಗಳು ಸ್ವೀಕೃತವಾಗಿವೆ ಎಂದು ಹೇಳಿದರು.

ಸಚಿವ ರೈ ಮಾತನಾಡಿ, ಹಕ್ಕು ಪತ್ರ ನೀಡಿ 2 ವರ್ಷದೊಳಗೆ ಆ ಜಾಗದಲ್ಲಿ ಮನೆ ನಿರ್ಮಿಸಿ ವಾಸವಾಗದೇ ಇದ್ದಲ್ಲಿ ಅಧಿಕಾರಿಗಳು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಒಂದು ವಾರದೊಳಗೆ ಉತ್ತರ ಸಿಗದಿದ್ದಲ್ಲಿ ಆ ಹಕ್ಕು ಪತ್ರ ರದ್ದು ಎಂದು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮಂಗಳೂರು- ಮೂಡಬಿದಿರೆ-ಕಾರ್ಕಳ ಹೆದ್ದಾರಿ ಅಗಲೀಕರಣ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಈ ತಿಂಗಳ ಅಂತ್ಯದೊಳಗೆ ಹೊರಡಿಸಲಾಗುವುದು ಎಂದು ಸಹಾಯಕ ಆಯುಕ್ತ ಡಾ. ಅಶೋಕ್ ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಕೂಡಲೇ ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವಂತೆ ಹೆದ್ದಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಂಪ್‌ವೆಲ್ ವೃತ್ತದಲ್ಲಿ ವಾಹನ ದಟ್ಟಣೆಯಿಂದ ಬ್ಲಾಕ್ ಆಗಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರಯಾಗುತ್ತಿದೆ ಎಂಬ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಯಿತು.

ಈ ಬಗ್ಗೆ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಪ್ರತಿಕ್ರಿಯಿಸಿ, ಕಳೆದ ಶನಿವಾರದಿಂದ ಬೆಳಗ್ಗೆ 8ರಿಂದ 9.30ರವರೆಗೆ ಅಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಸಿಇಒ ಶ್ರೀವಿದ್ಯಾ, ಪಾಲಿಕೆ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಮೇಯರ್ ಹರಿನಾಥ್, ಶಾಸಕ ಮೊಯ್ದೀನ್ ಬಾವ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಶಿರಾಡಿ ಕಾಂಕ್ರಿಟೀಕರಣ- ಸಂಪೂರ್ಣ ಬಂದ್‌ಗೆ ಒಪ್ಪಿಗೆ ಇಲ್ಲ: ಸಚಿವರೈ

ಮಳೆಗಾಲ ಮುಗಿದ ಬಳಿಕ ದ್ವಿತೀಯ ಹಂತದ ಶಿರಾಡಿ ಘಾಟ್ ಹೆದ್ದಾರಿಯ ಕಾಂಕ್ರಿಟೀಕರಣ ಕಾಮಗಾರಿ ಆರಂಭಿಸಬೇಕೆಂದು ಹೆದ್ದಾರಿ ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವ ರಮಾನಾಥ ರೈ, ಕಾಮಗಾರಿಯ ವೇಳೆ ಯಾವುದೇ ರೀತಿಯಲ್ಲಿ ಶಿರಾಡಿ ಘಾಟ್ ಸಂಪೂರ್ಣ ಬಂದ್‌ಗೆ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶಿರಾಡಿ ಘಾಟ್‌ನ ಎರಡನೆ ಹಂತದ ಕಾಮಗಾರಿಗೆ ಬೇಕಾದ ಸಾಮಗ್ರಿಗಳು, ಯಂತ್ರೋಪಕರಣಗಳ ಸಂಗ್ರಹ ಕಾರ್ಯ ಪ್ರಗತಿಯಲ್ಲದ್ದು, ಕಾಮಗಾರಿಯನ್ನು ಒಂದು ಬದಿಯಲ್ಲಿ ರಸ್ತೆಯನ್ನು ವಾಹನ ಸಂಚಾರಕ್ಕೆ ಅವಕಾಶ ನೀಡಿ ನಡೆಸಿದ್ದಲ್ಲಿ ಕಾಮಗಾರಿಗೆ ತೊಂದರೆಯಾಗಲಿದೆ. ಕಾಂಕ್ರೀಟ್ ಕಾಮಗಾರಿಗೆ ಬೇಕಾದ ಯಂತ್ರ ಸುಮಾರು 7 ಮೀಟರ್ ಅಗಲವಿದ್ದು, ರಸ್ತೆ ಉಳಿಯ ಭಾಕದಲ್ಲಿ ವಾಹನ ಸಂಚಾರಕ್ಕೆ ತೆರವುಗೊಳಿಸಿದ್ದಲ್ಲಿ ವಾಹನಗಳ ಸಂಚಲನದಿಂದ ಉಂಟಾಗುವ ಕಂಪನಗಳಿಂದ ಹಸಿ ಕಾಂಕ್ರೀಟ್ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿ ಸಭೆಯಲ್ಲಿ ತಿಳಿಸಿದರು.

ಘನ ವಾಹನಗಳಿಗೆ ಅವಕಾಶವಿಲ್ಲದಿದ್ದರೂ, ಸಣ್ಣ ವಾಹನಗಳಿಗೆ ಅವಕಾಶ ನೀಡುವ ಮೂಲಕ ಕಾಮಗಾರಿ ನಡೆಸಬೇಕು. ಸಂಪೂರ್ಣ ಬಂದ್‌ಗೆ ಒಪ್ಪಿಗೆ ಇಲ್ಲ ಎಂದು ಸಚಿವ ರೈ ಮತ್ತೆ ಅಧಿಕಾರಿಗೆ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News