×
Ad

ಪತ್ರಿಕೆ ಮೂಲಕ ಅರಿವಿನ ಆಂದೋಲನ ರೂಪಿಸಿದ ಪಿ.ಲಂಕೇಶ್

Update: 2016-03-14 20:13 IST

ಅನ್ಯಾಯ, ದೌರ್ಜನ್ಯ, ಶೋಷಣೆ, ದಬ್ಬಾಳಿಕೆ, ನೈತಿಕ ಅಧಪತನಗಳನ್ನೆಲ್ಲಾ ಸದಾ ವಿರೋಧಿಸುತ್ತಾ ಜೀವನವನ್ನು ಸವಾಲಾಗಿ ಸ್ವೀಕರಿಸಿದ ಮಹಾನ್ ಲೇಖಕ, ಕವಿ ಪಿ.ಲಂಕೇಶ್‌ರವರು, ಸರಕಾರಿ ಹುದ್ದೆಯನ್ನು ತೊರೆದು ಜನ ಮತ್ತು ಸಿದ್ಧಾಂತವನ್ನು ನಂಬಿಕೊಂಡೇ ಪತ್ರಿಕೆಯ ಮೂಲಕ ಅರಿವಿನ ಆಂದೋಲನವನ್ನು ರೂಪಿಸಿದರು ಎಂಬುದಾಗಿ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ರಾಜಶೇಖರ ಹಳೆಮನೆಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಕಾಂತಾವರ ಕನ್ನಡ ಸಂಘದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ಪಿ.ಲಂಕೇಶರ ಕವನಗಳ ಹೊಸ ಓದು, ಎಂಬ ವಿಷಯದ ಬಗ್ಗೆ ಮಾತನಾಡಿದರು.
ಕವಿಯಾಗಿ ಹೆಚ್ಚಾಗಿ ನೀಲು ಪದ್ಯಗಳೆಂಬ ಸಣ್ಣ ಪದ್ಯಗಳನ್ನೇ ಹೆಚ್ಚಾಗಿ ಅವರು ಬರೆದಿದ್ದು ಈ ಪದ್ಯಗಳ ಮೂಲಕವೇ ಅವರು ಮನುಷ್ಯನ ಎಲ್ಲಾ ಸಂಬಂಧಗಳನ್ನೂ ತೆರೆದು ತೋರಿಸುತ್ತಾರೆ. ಏಕಾಂತ, ವಿಷಾದ, ಮೌನ, ಸಂತೋಷ, ನೋವು ಮತ್ತು ಕಾಮವನ್ನೂ ಭಕ್ತಿಯ ನೆಲೆಯಲ್ಲಿ ಕಾಣುವ ಮತ್ತು ಕಾಮಕ್ಕೂ ಒಂದು ದಿವ್ಯತೆಯ ಸ್ಥಿತಿಯಿದೆ ಎಂಬುದನ್ನು ತಮ್ಮ ಪದ್ಯಗಳಲ್ಲಿ ತಿಳಿಸುವುದರಿಂದ ಇಡೀ ಕನ್ನಡ ಸಾಹಿತ್ಯದಲ್ಲಿ ಅವರ ನೀಲು ಪದ್ಯಗಳಲ್ಲಿ ಹೊಸ ಬಗೆಯ ಜೀವನ ಧರ್ಮವನ್ನು ಕಾಣಬಹುದಾಗಿದೆ.
ಸದಾ ಗೊಂದಲ ಮತ್ತು ವೈರುಧ್ಯದ ವ್ಯಕ್ತಿತ್ವವನ್ನು ಹೊಂದಿದ್ದ ಲಂಕೇಶರು ಒಂದು ಪರ್ಯಾಯ ಸಾಂಸ್ಕೃತಿಕ ಸ್ಥಿತಿ ಮತ್ತು ರಾಜಕೀಯವನ್ನು ನಿರ್ಮಾಣ ಮಾಡುವುದಕ್ಕಾಗಿ ಹೆಣಗಾಡಿದರು ಮತ್ತು ಕಾವ್ಯದಿಂದಲೇ ಉತ್ಕಟತೆ ಮತ್ತು ಪ್ರಕ್ಷುಬ್ಧತೆಯನ್ನು ಮೀರಲು ಸಾಧ್ಯವೆಂದು ನಂಬಿದವರಾಗಿದ್ದರು ಎಂದರು.
ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಂ.ಬಾಬುಶೆಟ್ಟಿ ನಾರಾವಿಯವರು ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಸದಾನಂದ ನಾರಾವಿಯವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News