×
Ad

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಬಿನ್ ಉತ್ತಪ್ಪ

Update: 2016-03-14 21:20 IST

ಮಡಿಕೇರಿ, ಮಾ. 14: ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಕೊಡಗಿನ ರಾಬಿನ್ ಉತ್ತಪ್ಪ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಧೀರ್ಘಕಾಲದ ಗೆಳತಿ ಅಂತರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಶೀತಲ್ ಗೌತಮ್ ಅವರೊಂದಿಗೆ ನಗರದ ಖಾಸಗಿ ಹೊಟೇಲೊಂದರಲ್ಲಿ ಸರಳ ಸಮಾರಂಭದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕೊಡಗಿನ ಸಂಪ್ರದಾಯದಂತೆ ಹಸೆಮಣೆಗೇರಿದರು.

ಕೊಡವ ಸಂಪ್ರದಾಯದಂತೆ ಶೀತಲ್ ಅವರನ್ನು ವರಿಸಿಕೊಂಡ ರಾಬಿನ್ ಉತ್ತಪ್ಪ, ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ಕುಟುಂಬ ಸದಸ್ಯರಿಗೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಕಳೆದ ನವೆಂಬರ್ ತಿಂಗಳಿನಲ್ಲಿ ಹೊರ ದೇಶದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಇವರು, ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಸಂಪ್ರದಾಯದಂತೆ ಸರಳವಾಗಿ ಮದುವೆಯಾಗುವುದಾಗಿ ಈ ಹಿಂದೆಯೇ ಘೊಷಿಸಿಕೊಂಡಿದ್ದರು.
 ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದವರಾದ ರಾಬಿನ್ ಉತ್ತಪ್ಪ, ಕರ್ನಾಟಕ ರಣಜಿ ತಂಡದಲ್ಲಿ ಪ್ರತಿನಿಧಿಸಿದ್ದರು. ನಂತರದ ದಿನಗಳಲ್ಲಿ ಭಾರತ ತಂಡಕ್ಕೆ ಆಯ್ಕೆಯಾದ ಇವರು, ವಿಕೆಟ್ ಕೀಪರ್ ಆಗಿ ತನ್ನ ಪ್ರದರ್ಶನವನ್ನು ಪ್ರದರ್ಶಿಸಿದರು. ಐಪಿಎಲ್‌ನಲ್ಲು ಆಟವಾಡಿರುವ ಇವರು, ಅಂತರಾಷ್ಟ್ರೀಯಾ ಹಾಕಿ ರೆಫರಿಯಾಗಿರುವ ವೇಣು ಉತ್ತಪ್ಪ ಮತ್ತು ರೋಸಿ ಉತ್ತಪ್ಪ ದಂಪತಿಯ ಸುಪುತ್ರರಾಗಿದ್ದಾರೆ.

ಶಾಸಕದ್ವಯರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಅವರು ನವ ಜೋಡಿಗೆ ಶುಭಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News