ಗುರೂಜಿಗೆ ಮಾತ್ರ ಇಷ್ಟು ದೊಡ್ಡ ಕಾರ್ಯಕ್ರಮ ಮಾಡಲು ಸಾಧ್ಯ: ಕೇಜ್ರಿವಾಲ್
ಹೊಸದಿಲ್ಲಿ, ಮಾ.14: ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ದಿಲ್ಲಿಯ ಯಮುನಾ ನದಿ ತೀರದಲ್ಲಿ ಆಯೋಜಿಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವ ನದಿ ಪರಿಸರಕ್ಕೆ ಹಾನಿಯುಂಟು ಮಾಡಿದೆಯೆಂಬ ವ್ಯಾಪಕ ಆರೋಪದ ನಡುವೆ ರಾಷ್ಟ್ರೀಯ ಹಸಿರು ಪ್ರಾಧಿಕರಣ ಸಂಸ್ಥೆಗೆ ರೂ. 5 ಕೋಟಿ ದಂಡ ವಿಧಿಸಿದ್ದರೂ ಉತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಯಮುನಾ ನದಿ ಶುದ್ಧೀಕರಣಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದಲೇ ಸಹಕಾರ ಕೋರಿ ಎಲ್ಲರ ಹುಬ್ಬೇರಿಸಿದ್ದಾರೆ.
‘‘ನಾವು ಯಮುನಾ ನದಿಯನ್ನು ಶುದ್ಧೀಕರಿಸಲು ಕಂಕಣಬದ್ಧರಾಗಿದ್ದೇವೆ. ಇಲ್ಲೇ ಕೇಂದ್ರ ಸಚಿವರು ನಿಮ್ಮ ಎಡಬದಿಗೆ ಕುಳಿತಿದ್ದರೆ, ದಿಲ್ಲಿ ಸಚಿವರು ಬಲಗಡೆಯಿದ್ದಾರೆ ನಮಗೆ ನಿಮ್ಮ ಸಹಾಯದ ಅಗತ್ಯವಿದೆ’’ ಎಂದು ಕೇಜ್ರಿವಾಲ್ ಹೇಳಿದರು.
ತನ್ನ ಭಾಷಣದಲ್ಲಿ ಕೇಜ್ರಿವಾಲ್ ಆರ್ಟ್ ಆಫ್ ಲಿವಿಂಗ್ ಮೇಲೆ ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದು ‘‘ಎಒಎಲ್ ಕಾರ್ಯಕರ್ತರು ಯಾವತ್ತೂ ಶಿಸ್ತಿನವರಾಗಿದ್ದು ನಗುಮೊಗ ಹೊಂದಿದ್ದಾರೆ. ದಿಲ್ಲಿ ಸರಕಾರ ಆಯೋಜಿಸುವ ಹಲವು ಕಾರ್ಯಕ್ರಮಗಳಿಗೆ ಕಾರ್ಯಕರ್ತರು ಬೇಕಾಗಿದ್ದು ನಿಮ್ಮ ಕಾರ್ಯಕರ್ತರನ್ನು ಕಳುಹಿಸಿ ಕೊಡಿ’’ ಎಂದು ಕೇಜ್ರಿವಾಲ್ ಎಒಎಲ್ ಸಂಸ್ಥೆಯನ್ನು ವಿನಂತಿಸಿದರು.
ಅವರು ಹೀಗೆಂದಾಗ ಕೆಲವು ಸಭಿಕರು ಅವರಿಗೆ ಜೈಕಾರ ಹಾಕಿದರೆ ಮತ್ತೆ ಕೆಲವರು ಅವರನ್ನು ಹೀಗಳೆದರು.
ಕಾರ್ಯಕ್ರಮ ಯಮುನಾ ನದಿ ಪರಿಸರ ಹಾನಿಗೊಳಿಸಿದ್ದಕ್ಕೆ ಟೀಕೆ ವ್ಯಕ್ತವಾದ ಹೊರತಾಗಿಯೂ ಕಾರ್ಯಕ್ರಮವನ್ನು ಪ್ರಶಂಸಿಸಿದ ಕೇಜ್ರಿವಾಲ್ ‘‘ಈ ಕಾರ್ಯಕ್ರಮ ದೈವಿಕ ಹಾಗೂ ಅಸಾಮಾನ್ಯವಾಗಿದೆ. ತಮ್ಮ ಶಾಂತಿ ಹಾಗೂ ಪ್ರೇಮದ ಸಂದೇಶದಿಂದ ಗುರೂಜಿಯವರಿಗೆ ಮಾತ್ರ ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲು ಸಾಧ್ಯ’’ ಎಂದು ಕೇಜ್ರಿವಾಲ್ ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಯಮುನಾ ನದಿ ಕಲುಷಿತವಾಗಿಲ್ಲವೆಂದು ಹೇಳಿದರು. ‘‘ಯಮುನಾ ಕಲುಷಿತಗೊಂಡಿದೆಯೆಂದು ಜನರು ಹೇಳುತ್ತಿದ್ದಾರೆ. ಆದರೆ ಇಲ್ಲಿ ನೋಡಿ ಅದು ಶುದ್ಧ ಹಾಗೂ ಶಾಂತವಾಗಿದೆ. ಕಲುಷಿತವಾಗಿರುವುದು ಜನರ ಮನಸ್ಸು’’ ಎಂದರು.
ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಕೂಡ ಮಾತನಾಡಿ ‘‘ಇಲ್ಲಿ ಮಾಲಿನ್ಯವಿಲ್ಲ, ಕೇವಲ ಸಂಸ್ಕೃತಿಯಿದೆ, ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಇಲ್ಲಿ ಕೇವಲ ನಗುವಿದೆ’’ ಎಂದರು.