×
Ad

2015ರ ಕೊನೆಗೆ 161 ಬಾರಿ ರಾಸಾಯನಿಕ ಅಸ್ತ್ರ ಬಳಕೆ

Update: 2016-03-14 23:40 IST

ನ್ಯೂಯಾರ್ಕ್, ಮಾ. 14: ಸಿರಿಯದ ನಾಗರಿಕ ಯುದ್ಧಕ್ಕೆ ಈ ತಿಂಗಳು ಐದು ವರ್ಷ ತುಂಬುತ್ತಿರುವಂತೆಯೇ, 2015ರ ಕೊನೆಯ ವೇಳೆಗೆ ಕನಿಷ್ಠ 161 ಬಾರಿ ರಾಸಾಯನಿಕ ಅಸ್ತ್ರಗಳನ್ನು ಬಳಸಲಾಗಿದೆ ಹಾಗೂ ಇದರಿಂದ 1,491 ಮಂದಿ ಮೃತಪಟ್ಟಿದ್ದಾರೆ ಎಂದು ನೂತನ ವರದಿಯೊಂದು ತಿಳಿಸಿದೆ.
ಇಂಥ ದಾಳಿಗಳು ಹೆಚ್ಚುತ್ತಿದ್ದು, 14,581 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಸಿರಿಯದಲ್ಲಿ ಈವರೆಗೆ ನಡೆಸಲಾದ ರಾಸಾಯನಿಕ ದಾಳಿಯ ಸಮಗ್ರ ವರದಿ ಇದಾಗಿದೆ ಎಂದು ಸೋಮವಾರ ವರದಿಯನ್ನು ಬಿಡುಗಡೆಗೊಳಿಸಿದ ಸಿರಿಯನ್ ಅಮೆರಿಕನ್ ಮೆಡಿಕಲ್ ಸೊಸೈಟಿ ಹೇಳಿದೆ.
ರಾಸಾಯನಿಕ ದಾಳಿ ಸಂತ್ರಸ್ತರಿಗೆ ಚಿಕಿತ್ಸೆ ನೀಡಿದ ವೈದ್ಯಕೀಯ ಸಿಬ್ಬಂದಿ, ಸರಕಾರೇತರ ಸಂಘಟನೆಗಳು ಮತ್ತು ಇತರ ಸ್ಥಳೀಯ ಮೂಲಗಳಿಂದ ಪಡೆದ ಮಾಹಿತಿಗಳ ಆಧಾರದಲ್ಲಿ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಮೆರಿಕದ ಲಾಭರಹಿತ ಸಂಸ್ಥೆ ಹೇಳಿದೆ.
ಸಿರಿಯನ್ ಅಮೆರಿಕನ್ ಮೆಡಿಕಲ್ ಸೊಸೈಟಿಯು ಸಿರಿಯದಲ್ಲಿರುವ 100ಕ್ಕೂ ಅಧಿಕ ವೈದ್ಯಕೀಯ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಚಿಕಿತ್ಸೆ ನೀಡುತ್ತಿದೆ ಹಾಗೂ 1,700ಕ್ಕೂ ಅಧಿಕ ಸಿಬ್ಬಂದಿಯನ್ನು ಹೊಂದಿದೆ.
ರಾಸಾಯನಿಕ ದಾಳಿಗೆ ಕಾರಣರಾದವರನ್ನು ಕೂಡಲೇ ಪತ್ತೆ ಹಚ್ಚಿ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಅಥವಾ ಇತರ ವಿಧಾನಗಳ ಮೂಲಕ ಅವರ ಮೇಲೆ ಉತ್ತರದಾಯಿತ್ವವನ್ನು ಹೊರಿಸುವಂತೆ ಸಂಘಟನೆಯು 15 ಸದಸ್ಯರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ್ತು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸುತ್ತಿದೆ.
ಸಿರಿಯ ಸರಕಾರವು ತನ್ನ ಜನರ ಮೇಲೆಯೇ ರಾಸಾಯನಿಕ ದಾಳಿಗಳನ್ನು ನಡೆಸುತ್ತಿದೆ ಎಂಬುದಾಗಿ ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳು ಪದೇ ಪದೇ ಆರೋಪಿಸುತ್ತಿವೆ. ಡಮಾಸ್ಕಸ್‌ನ ಉಪನಗರವೊಂದರ ಮೇಲೆ ಸಿರಿಯ ಸರಕಾರ 2013ರಲ್ಲಿ ಭೀಕರ ರಾಸಾಯನಿಕ ದಾಳಿ ನಡೆಸಿದ ಬಳಿಕ ನಿರ್ಣಯವೊಂದನ್ನು ಅಂಗೀಕರಿಸಿದ್ದ ಭದ್ರತಾ ಮಂಡಳಿ, ತನ್ನ ರಾಸಾಯನಿಕ ಅಸ್ತ್ರ ಕಾರ್ಯಕ್ರಮವನ್ನು ಕೊನೆಗೊಳಿಸುವಂತೆ ಸಿರಿಯಕ್ಕೆ ತಾಕೀತು ಮಾಡಿತ್ತು. ಆ ಆದೇಶದ ಬಳಿಕವೂ ಸಿರಿಯ ನಿರಂತರವಾಗಿ ರಾಸಾಯನಿಕ ಅಸ್ತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ಡಮಾಸ್ಕಸ್‌ನ ಉಪನಗರದ ಮೇಲೆ ನಡೆದ ರಾಸಾಯನಿಕ ದಾಳಿಯಲ್ಲಿ ನೂರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News