ಜಿಲ್ಲಾಧಿಕಾರಿ ಕಾರು ಜಪ್ತಿಗೆ ನ್ಯಾಯಾಲಯದ ಆದೇಶ
ತಿರುನೆಲ್ವೆಲಿ(ತ.ನಾ.),ಮಾ.14: ತನ್ನ ಆದೇಶದಂತೆ ಭೂ ಸ್ವಾಧೀನ ಪರಿಹಾರದ ಬಾಕಿ ಮೊತ್ತ 20 ಲ.ರೂ.ಗಳನ್ನು ಪಾವತಿಸಲು ವಿಫಲರಾಗಿದ್ದಕ್ಕಾಗಿ ಜಿಲ್ಲಾಧಿಕಾರಿ ಕರುಣಾಕರನ್ ಮತ್ತು ಕಂದಾಯ ವಿಭಾಗಾಧಿಕಾರಿ ಬೆರ್ಮಿ ವಿದ್ಯಾ ಅವರ ವಾಹನಗಳನ್ನು ಜಪ್ತಿ ಮಾಡುವಂತೆ ಸ್ಥಳೀಯ ನ್ಯಾಯಾಲಯವು ಸೋಮವಾರ ಆದೇಶಿಸಿತು. ಜಿಲ್ಲಾಧಿಕಾರಿಗಳು ಚುನಾವಣಾ ಸಂಬಂಧಿ ಕಾರ್ಯಕ್ಕೆ ಹೊರಡಲು ಅಣಿಯಾಗಿದ್ದಾಗ ನ್ಯಾಯಾ ಲಯದ ಆದೇಶದೊಂದಿಗೆ ಅವರ ಕಚೇರಿಯನ್ನು ತಲುಪಿದ ಕೋರ್ಟ್ ಅಮೀನರು ಅವರ ವಾಹನವನ್ನು ವಶಪಡಿಸಿಕೊಂಡರು. ಕಂದಾಯ ವಿಭಾಗಾಧಿಕಾರಿಗಳ ಕಾರನ್ನು ಅದನ್ನು ನಿಲ್ಲಿಸಿದ್ದ ಸ್ಥಳದಿಂದ ಜಪ್ತಿ ಮಾಡಲಾಯಿತು.
‘ಐಎನ್‌ಎಸ್ ವಿಜಯನಾರಾಯಣಂ’ಗಾಗಿ ಮೈಕ್ರೋವೇವ್ ಟವರ್ ನಿರ್ಮಿಸಲು ರೆಡ್ಡಿಯಾರ್‌ಪತ್ತಿಯ ನಾಲ್ವರು ಸೋದರರಿಗೆ ಸೇರಿದ್ದ 32 ಎಕರೆ ಭೂಮಿಯನ್ನು ಜಿಲ್ಲಾಡಳಿತವು ವಶಪಡಿಕೊಂಡಿತ್ತು ಮತ್ತು ಅದಕ್ಕಾಗಿ ಪ್ರತಿ ಸೆಂಟ್‌ಗೆ 200 ರೂ. ಬೆಲೆ ಯನ್ನು ನಿಗದಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಭೂ ಮಾಲ ಕರು 1982ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು, ಪರಿಹಾರವನ್ನು 30 ಲಕ್ಷ.ರೂ.ಗೆ ನಿಗದಿಪಡಿಸಲಾಗಿತ್ತು. ಪರಿಹಾರದ ಮೊತ್ತವನ್ನು ಈ ವರ್ಷದ ಜ.31ರೊಳಗೆ ಪಾವತಿಸುವಂತೆ ಅದು ಆದೇಶಿಸಿತ್ತು. ಆದರೆ ಅಧಿಕಾರಿಗಳು 10 ಲ.ರೂ.ಮಾತ್ರ ಪಾವತಿಸಿದ್ದರು. ಹೀಗಾಗಿ ಡಿಕ್ರಿಗೆ ಆದೇಶ ಕೋರಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.