ಮೂಡುಬಿದಿರೆ: ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್‌ಗೆ ಚಾಲನೆ
ಮೂಡುಬಿದಿರೆ, ಮಾ.15 : ಯಾವುದೇ ಸ್ಪರ್ಧೆಯಲ್ಲಿ ಸೋಲು-ಗೆಲುವು ಅನಿವಾರ್ಯ ಆದರೆ ಛಲ ಮುಖ್ಯ. ಆಧುನಿಕ ಭಾರತದಲ್ಲಿ ಎಲ್ಲಾ ಕ್ರೀಡೆಗಳು ಬೆಳವಣಿಗೆಯನ್ನು ಕಂಡಿವೆ ಆದರೆ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯು ಕುಸಿಯುತ್ತಿದೆ. ಆದ್ದರಿಂದ ಈ ಕ್ರೀಡೆಗೆ ಕಾರ್ಯಕಲ್ಪ ನೀಡುವಂತಹ ಕೆಲಸಗಳು ಇನ್ನೂ ಹೆಚ್ಚಾಗಿ ಆಗಬೇಕಾಗಿದೆ ಎಂದು ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಅವರು ಮೂಡುಬಿದಿರೆ ವಿದ್ಯಾಗಿರಿಯಲ್ಲಿ ಆಯೋಜಿಸಿರುವ ಮಂಗಳೂರು ವಿವಿ ಮಟ್ಟದ ಪುರುಷರ ಅಂತರ್ ಕಾಲೇಜು ಬ್ಯಾಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಕಿಶೋರ್ ಕುಮಾರ್ ಮಾತನಾಡಿ ವಿವಿಯು ಕ್ರೀಡೆಗೆ ಮತ್ತು ಕ್ರೀಡಾಪಟುಗಳಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಿದ್ದು, ಈ ನಿಟ್ಟಿನಲ್ಲಿ ಸಾಧನೆಗೆ ಪೂರಕವಾಗಿ 70ಲಕ್ಷ ರೂ. ವೆಚ್ಚದಲ್ಲಿ ಜೆಮ್ನಾಶಿಯ ಹಾಗೂ ದೈಹಿಕ ಮತ್ತು ಮಾನಸಿಕವಾಗಿ ಅಧ್ಯಯನ ಮಾಡಲು 60 ಲಕ್ಷ ವೆಚ್ಚದಲ್ಲಿ ಪ್ರಯೋಗಾಲಯ ನಿರ್ಮಿಸಲು "ಇ" ಟೆಂಡರ್‌ನ್ನು ಕರೆಯಲಾಗಿದೆ ಎಂದು ತಿಳಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿ, ಕ್ರೀಡಾಪಟು ಯತೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸ್ಪರ್ಧೆಯ ಮೇಲ್ವಿಚಾರಕ ದಯಾಕರ ಉಪಸ್ಥಿತರಿದ್ದರು.