ಭಟ್ಕಳ: ಅರಣ್ಯ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಕಡಲಾಮೆ ಸಂರಕ್ಷಣೆ ಕುರಿತ ಮಾಹಿತಿ ಶಿಬಿರ
ಕರ್ನಾಟಕ ಅರಣ್ಯ ಇಲಾಖೆ, ಹೊನ್ನಾವರ ಅರಣ್ಯ ವಿಭಾಗ, ಭಟ್ಕಳ ಉಪ ವಿಭಾಗ, ಭಟ್ಕಳ ವಲಯದ ವತಿಯಿಂದ ಭಟ್ಕಳದ ಬಂದರ್‌ನ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕಡಲಾಮೆಯ ಸಂರಕ್ಷಣೆಯ ಬಗೆಗಿನ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಲ್. ನಂದೀಶ ಮಕ್ಕಳಿಗೆ ಉಪನ್ಯಾಸ ನೀಡಿ ಮನುಷ್ಯನು ತನ್ನ ಸ್ವೆಚ್ಛಾಚಾರಕ್ಕೆ ಕಡಲ ಜೀವಿಗಳನ್ನು ನಾಶ ಮಾಡುತ್ತಿದ್ದು, ಇದರಿಂದ ಮುಗ್ಧ ಕಡಲ ಜೀವಿಗಳ ವಿನಾಶದಂಚಿನಲ್ಲಿವೆ ಎಂದರು. ಮುಖ್ಯವಾಗಿ ಕರಾವಳಿಯಲ್ಲಿ ಕಡಲಾಮೆಯ ಸಂಖ್ಯೆಯಲ್ಲಿ ತೀರಾ ಇಳಿಕೆ ಉಂಟಾಗಿದ್ದು, ಇನ್ನು ಮುಂದಿನ ಪೀಳಿಗೆಯವರಿಗೆ ಕಡಲ ಜೀವಿಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ. ಕಡಲ ಜೀವಿಗಳನ್ನು ಉಳಿಸಿ ಅವುಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ಕೂಡಾ ಹೊಂದಲಾಗಿದ್ದು ಮಾನವರು ಪ್ರಕೃತಿಯನ್ನು ಒತ್ತಡಕ್ಕೆ ಸಿಲುಕಿಸಿದರೆ ಪ್ರಕೃತಿ ನಮ್ಮ ಮೇಲೆ ತಿರುಗು ಬೀಳುವುದು ಎನ್ನುವುದುಮಾತ್ರ ಸತ್ಯ ಎಂದೂ ಹೇಳಿದರು.
ಇಲ್ಲಿಯ ತನಕ ಭಟ್ಕಳ ವಲಯ ಒಂದರಿಂದಲೇ 60000 ಸಾವಿರ ಕಡಲಾಮೆಯ ಮೊಟ್ಟೆಗಳನ್ನು ಸಂರಕ್ಷಿಸಿದ್ದು, ಅದರಲ್ಲಿ ಒಟ್ಟು 29000 ಸಾವಿರ ಮರಿಗಳನ್ನು ಕಡಲಿಗೆ ಬಿಡಲಾಗಿದೆ. ಕರಾವಳಿ ಭಾಗದಲ್ಲಿರುವ ಕಡಲಾಮೆಗಳಲ್ಲಿ "ಆಲಿವ್ ರಿಡ್ಲೆ" ಎಂಬ ಜಾತಿಯ ಕಡಲಾಮೆಯ ಸಂಖ್ಯೆ ಹೆಚ್ಚು ಕಾಣ ಸಿಗುತ್ತವೆ. ಆದರೆ ಈಗ ಇವುಗಳ ಸಂಖ್ಯೆಯಲ್ಲು ಸಹ ಇಳಿಕೆ ಉಂಟಾಗಿದ್ದು ವಿಪರ್ಯಾಸವೇ ಆಗಿದೆ. ದಕ್ಷಿಣ ಫೌಂಡ್ ಎಂಬ ಎನ್.ಜಿ.ಓ. ಸಂಸ್ಥೆಯು ಕಡಲಾಮೆ ಸಂರಕ್ಷಣೆಗೆ ಸಹಾಯ ಮಾಡಿದ್ದು, ದಕ್ಷಿಣ ಫೌಂಡ್ ಎನ್.ಜಿ.ಓ.ಯಿಂದ ಗಾಯತ್ರಿ. ಬಿ. ಹಾಗೂ ಅನುಭವ.ಬಿ. ಕಳೆದ ಒಂದು ತಿಂಗಳಿಂದ ಹೊನ್ನಾವರ, ಭಟ್ಕಳ ಹಾಗೂ ಇನ್ನಿತರ ಕರಾವಳಿ ತೀರದಲ್ಲಿ ಕಡಲಾಮೆಯ ಬಗ್ಗೆ ಸಂರಕ್ಷಣೆ ಮಾಡಿ ಕಾರ್ಯಕ್ರಮದಲ್ಲಿ ಕಡಲಾಮೆಗ ಬಗ್ಗೆ ಮಕ್ಕಳಿಗೆ ಅದರ ಜೀವನದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದೂ ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಭಟ್ಕಳ ವಲಯ ಅರಣ್ಯಧಿಕಾರಿ ರವೀಂದ್ರ, ಮಾವಿನಕುರ್ವೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ಮಾದೇವ ನಾಯ್ಕ. ಉಪಾಧ್ಯಕ್ಷ ಮಂಜುನಾಥ ಖಾರ್ವಿ, ಪಂಚಾಯತ್ ಪಿ.ಡಿ.ಓ. ಎಸ್.ವಿ.ಭಟ್,ಮುಂತಾದವರು ಉಪಸ್ಥಿತರಿದ್ದರು.
ಉಪ ವಲಯ ಸಂರಕ್ಷಣಾಧಿಕಾರಿ ರವಿ ಎಸ್. ಸ್ವಾಗತಿಸಿದರು. ರಾಮಾ ನಾಯ್ಕ ವಂದಿಸಿದರು.