ಗೋವಿಂದ ಶಾಸ್ತ್ರಿ ಆರೋಪದಲ್ಲಿ ಸತ್ಯಾಂಶವಿಲ್ಲ-ಗಂಗಾಧರ ಶಾಸ್ತ್ರಿ

Update: 2016-03-15 11:40 GMT

ಪುತ್ತೂರು : ಶ್ಯಾಮ್ ಪ್ರಸಾದ್ ಶಾಸ್ತ್ರಿ ಅವರ ಸಾವಿನ ತನಿಖೆಯನ್ನು ನಡೆಸುತ್ತಿರುವ ಸಿಐಡಿ ಪೊಲೀಸರ ತನಿಖೆ ಅಂತಿಮ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಈ ಸಾವು ಆತ್ಮಹತ್ಯೆಯಲ್ಲ. ಇದು ವ್ಯವಸ್ಥಿತ ಕೊಲೆ ಎಂದು ಬಿಂಬಿಸಿ ದಿವಾಕರ ಶಾಸ್ತ್ರಿ ಮತ್ತು ಇತರರ ಮೇಲೆ ಕೊಲೆ ದೂರನ್ನು ಪುತ್ತೂರಿನ ನ್ಯಾಯಾಲಯದಲ್ಲಿ ದಾಖಲಿಸಿದ ಗೋವಿಂದ ಶಾಸ್ತ್ರಿಯವರ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಆರೋಪಿಗಳಾದ ರಾಘವೇಶ್ವರ ಸ್ವಾಮೀಜಿ, ಡಾ. ಪ್ರಭಾಕರ ಭಟ್ ಕಲ್ಲಡ್ಕ ಮತ್ತು ಬಿ. ಶಿವಶಂಕರ ಭಟ್ ಅವರನ್ನು ರಕ್ಷಿಸಲು ಮತ್ತು ತನಿಖೆಯ ದಿಕ್ಕು ತಪ್ಪಿಸಲು ಗೋವಿಂದ ಶಾಸ್ತ್ರಿ ಈ ದೂರು ನೀಡಿದ್ದಾರೆ ಎಂದು ಶ್ಯಾಮ ಪ್ರಸಾದ್ ಶಾಸ್ತ್ರಿ ಅವರ ಹಿರಿಯ ಸಹೋದರ ಸಿ.ಎಂ. ಗಂಗಾಧರ ಶಾಸ್ತ್ರಿ ಮತ್ತು ಶ್ಯಾಮ್ ಪ್ರಸಾದ್ ಅವರ ಪತ್ನಿ ಸಂಧ್ಯಾಲಕ್ಷ್ಮೀ ತಿಳಿಸಿದ್ದಾರೆ. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶ್ಯಾಮಪ್ರಸಾದ್ ಶಾಸ್ತ್ರಿಯವರ ಆತ್ಮಹತ್ಯೆ ಪ್ರಕರಣ ಮತ್ತು ಪ್ರೇಮಲತಾ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ತನಿಖಾಧಿಕಾರಿಗಳ ಮತ್ತು ನ್ಯಾಯಾಂಗ ವ್ಯವಸ್ಥೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ. ರಾಘವೇಶ್ವರ ಸ್ವಾಮೀಜಿ, ಡಾ. ಪ್ರಭಾಕರ ಭಟ್ ಕಲ್ಲಡ್ಕ ಮತ್ತು ಬಿ.

ಶಿವಶಂಕರ ಭಟ್ ಅವರು ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಇವರನ್ನು ರಕ್ಷಿಸುವ ದುರುದ್ದೇಶದಿಂದ ರಾಮಚಂದ್ರಾಪುರ ಪೀಠದಲ್ಲಿ ಅತ್ಯಾಚಾರದ ಆರೋಪ ಬಂದ ಬಳಿಕವೂ ಕುಳಿತಿರುವ ರಾಘವೇಶ್ವರ ಸ್ವಾಮೀಜಿ ಅವರ ಕುಮ್ಮಕ್ಕಿನಿಂದ ಗೋವಿಂದ ಶಾಸ್ತ್ರಿ ಅವರು ಈ ದೂರನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ ಎಂದು ಆರೋಪಿಸಿದರು. ದೂರುದಾರ ಗೋವಿಂದ ಶಾಸ್ತ್ರಿ 7 ತಲೆಮಾರುಗಳ ಹಿಂದೆ ಕವಲೊಡೆದ ಚಕ್ರಕೋಡಿ ವಂಶದ ಒಂದು ಶಾಖೆಯಲ್ಲಿ ಜನಿಸಿದವರು. ಇವರು ನಮ್ಮ ಕುಟುಂಬದ ಆಪ್ತ ಬಂಧುವಲ್ಲ. ಪ್ರೇಮಲತಾ ದಿವಾಕರ ಶಾಸ್ತ್ರಿ, ಡಾ ಗಣೇಶ್ ಶರ್ಮ ಮತ್ತು ಕೆ.ಕೆ. ವೆಂಕಟಕೃಷ್ಣರಿಗೆ ಬಂದ ಬೆದರಿಕೆ ಪತ್ರಗಳನ್ನು ಗೋವಿಂದ ಶಾಸ್ತ್ರಿಗಳೇ ಕಳುಹಿಸಿರಬೇಕೆಂಬ ಸಂಶಯವಿದೆ. ಗೋವಿಂದ ಶಾಸ್ತ್ರಿಯನ್ನು ಬಂಧಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ದಿವಾಕರ ಶಾಸ್ತ್ರಿಯವರ ಕೋವಿಗೆ ಬಂಟ್ವಾಳ ತಾಲೂಕು ಪರವಾನಿಗೆ ಇದೆ. ಇವರು ಕೋವಿ ಪರವಾನಿಗೆ ಹೊಂದಿರುವ ತನ್ನ ಸಹೋದರ ಶ್ಯಾಮ ಪ್ರಸಾದ ಶಾಸ್ತ್ರಿಯವರ ಮನೆಯಲ್ಲಿ ಈ ಕೋವಿಯನ್ನು ಇರಿಸಲು ಕಾನೂನಿನಲ್ಲಿ ಅವಕಾಶವಿದೆ. ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಶಾಮ ಪ್ರಸಾದ್ ಶಾಸ್ತ್ರಿಯವರು ಈ ಕೋವಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾನಸಿಕ ಖಿನ್ನತೆಯದ್ದ ಶ್ಯಾಮಪ್ರಸಾದರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯಾವ ಕೋವಿ ಎಂದು ಆಯ್ಕೆ ಮಾಡುವ ವಿವೇಚನೆ ಇರಲಿಲ್ಲ. ಎರಡೂ ಕೋವಿಗಳನ್ನು ಪೊಲೀಸರು ತನಿಖೆಯ ಸಂದರ್ಭದಲ್ಲಿ ವಶಕ್ಕೆ ತೆಗೆದುಕೊಂಡಿರುತ್ತಾರೆ ಎಂದು ಅವರು ಗೋವಿಂದ ಶಾಸ್ತ್ರಿ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಗೋವಿಂದ ಶಾಸ್ತ್ರಿಯವರು ಸಲ್ಲಿಸಿದ ಖಾಸಗಿ ದೂರಿನ ಎಲ್ಲಾ ಆರೋಪಗಳು ಸುಳ್ಳಾಗಿದ್ದು, ಇವರು ದಿವಾಕರ ಶಾಸ್ತ್ರಿ, ಡಾ ಗಣೇಶ್ ಶರ್ಮ ಮತ್ತು ಕೆ.ಕೆ. ವೆಂಕಟಕೃಷ್ಣ ಅವರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಾನೂನು ರೀತಿಯ ಕ್ರಮಗಳಿಗೆ ಮುಂದಾಗುವುದು ಅನಿವಾರ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News