ಪುತ್ತೂರು: ಮೇ.1: ಮರಾಟಿ ಸಮಾಜದ ಸಾಮೂಹಿಕ ವಿವಾಹ
ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಇದರ ಆಶ್ರಯದಲ್ಲಿ ಮೇ.1ರಂದು ಪುತ್ತೂರಿನ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ 3ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶೇಷಪ್ಪ ನಾಯ್ಕ ದೊಡ್ಡಡ್ಕ ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮರಾಟಿ ಸಮಾಜ ಭಾಂದವರಿಗಾಗಿ ನಡೆಯುವ ಈ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸುವ ವಧುವಿಗೆ ಚಿನ್ನದ ತಾಳಿ, ಬೆಳ್ಳಿಯ ಸರ, ಸೀರೆ ಮತ್ತು ರವಿಕೆ ಕಣ ಹಾಗೂ ವರನಿಗೆ ಧೋತಿ, ಶಾಲು, ಶರ್ಟ್ ಮತ್ತು ಪೇಟ ನೀಡಲಾಗುವುದು.
ಆಡಂಬರದ ಮದುವೆಯನ್ನು ತಡೆಗಟ್ಟುವ ಹಾಗೂ ಬಾಲ್ಯ ವಿವಾಹವನ್ನು ತಡೆಗಟ್ಟುವ ಬಗ್ಗೆ ಸರ್ಕಾರ ಹೊರಡಿಸಿದ ಸುತ್ತೋಲೆಯಂತೆ ವಧೂ-ವರರ ಭಾವಚಿತ್ರ, ವಯಸ್ಸಿನ ದೃಡಪತ್ರ, ವಾಸಸ್ಥಳ ಪ್ರಮಾಣ ಪತ್ರ, ಪೋಷಕರಿಂದ ವಿವಾಹ ಯೋಗ್ಯ ಪ್ರಮಾಣ ಪತ್ರ ಮತ್ತು ವಧೂವರರ ಒಪ್ಪಿಗೆ ಪತ್ರವನ್ನು ಸಂಘಕ್ಕೆ ನೀಡಬೇಕಾಗಿದೆ. ವಿವಾಹವಾಗಲು ಇಚ್ಚಿಸುವ ವಧೂವರರು ಸಂಘದ ಕಚೇರಿಯಲ್ಲಿ ಎಪ್ರಿಲ್ 20ರ ಒಳಗಾಗಿ ನೋಂದಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಆಶೋಕ್ ಕುಮಾರ್ ಬಲ್ನಾಡು, ಉಪಾಧ್ಯಕ್ಷ ಜೆ.ಸುಬ್ಬನಾಯ್ಕ, ಸಂಚಾಲಕ ಪಿ. ಶೇಷು ನಾಯ್ಕ ಮತ್ತು ಸದಸ್ಯ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು.