ಪುತ್ತೂರು: ರಾಜು ಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಲು ಬಜರಂಗದಳ ಆಗ್ರಹ
ಪುತ್ತೂರು: ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಕೊಲೆಗೀಡಾದ ಹಿಂದು ಸಂಘಟನೆಗಳ ಕಾರ್ಯಕರ್ತ ರಾಜು ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ನೀಡಬೇಕು. ಅಲ್ಲದೇ ಈ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪುವೆಲ್ ಆಗ್ರಹಿಸಿದ್ದಾರೆ.
ಪುತ್ತೂರು ಮಿನಿವಿಧಾನಸೌಧ ಮುಂಭಾಗ ಬಜರಂಗದಳ, ವಿಶ್ವ ಹಿಂದು ಪರಿಷತ್ ವತಿಯಿಂದ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ರಾಜು ಹತ್ಯೆ ಪ್ರಕರಣಕ್ಕೆ ರಾಜ್ಯ ಸರ್ಕಾರ ನೇರ ಹೊಣೆ. ಕ್ಯಾತಮಾರನಹಳ್ಳಿಯಲ್ಲಿ ಜಿಹಾದಿಗಳ ದೌರ್ಜನ್ಯ ಸಹಿಸಲಾಗದೆ ಹಿಂದು ಕುಟುಂಬಗಳು ವಲಸೆ ಹೋಗುತ್ತಿವೆ. ಹಿಂದುಗಳಲ್ಲಿ ದೈರ್ಯ ತುಂಬುವ ಕೆಲಸ ಮಾಡುತ್ತಿದ್ದ ರಾಜುವನ್ನು ಜಿಹಾದಿಗಳು ಹತ್ಯೆ ನಡೆಸಿದ್ದಾರೆ. ರಾಜ್ಯ ಸರ್ಕಾರ ಜಿಹಾದಿಗಳಿಗೆ ಪರೋಕ್ಷ ಪ್ರೇರಣೆ ನೀಡಿದೆ ಎಂದು ಆರೋಪಿಸಿದ ಅವರು ಮುಖ್ಯಮಂತ್ರಿಗಳು ಬಹುಸಂಖ್ಯಾಕರಿಗೆ ನ್ಯಾಯ ನೀಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಬಜರಂಗದಳದ ವಿಭಾಗ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಡೀಕಯ್ಯ ಪೆರ್ವೋಡಿ, ಪ್ರಖಂಡ ಅಧ್ಯಕ್ಷ ಕೃಷ್ಣ ಪ್ರಸಾದ್ ಬೆಟ್ಟ, ವಕೀಲ ಮಾಧವ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಫೋಟೋ: ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿರುವುದು.