ಪುತ್ತೂರು: ಅಂತರ್ ಕಾಲೇಜು ತುಳು ಜಾನಪದ ಕ್ರೀಡೋತ್ಸವ, ತುಳು ಅಳಿಯುವ ಭಾಷೆಯಲ್ಲ-ಚಂದ್ರಹಾಸ ರೈ
ಪುತ್ತೂರು: 2011ರ ಜನಗಣತಿ ಪ್ರಕಾರ ಅಧಿಕೃತವಾಗಿ ತುಳು ಮಾತೃಭಾಷೆ ಮಾತನಾಡುವವರ ಸಂಖ್ಯೆ 19 ಲಕ್ಷವಿದ್ದು, ಅಳಿದು ಹೋಗುವ ಭಾಷೆಯ ಪಟ್ಟಿಯಲ್ಲಿ ಕನ್ನಡ ಮತ್ತು ತುಳುವನ್ನು ಯುನೇಸ್ಕೋ ವರದಿಯಲ್ಲಿ ಸೇರಿಸಲಾಗಿತ್ತು. ಆದರೆ ತುಳು ಭಾಷೆಯ ಇತಿಹಾಸ, ಪರಂಪರೆ ಮತ್ತು ವರ್ತಮಾನ ನೋಡುವಾಗ ಇದು ಅಳಿಯುವ ಭಾಷೆಯಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ಮಂಗಳವಾರ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಅಂತರ್ ಕಾಲೇಜು ತುಳು ಜಾನಪದ ಕ್ರೀಡೋತ್ಸವವನ್ನು ತುಳು ಸಂಪ್ರದಾಯದ ಕಲಸೆಗೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ತುಳು ಭಾಷೆಯ ಮೇಲಿನ ಅಭಿಮಾನ ಬೆಳೆಯುತ್ತಿದೆ. ಸಂಸ್ಕೃತಿ ಮೇಲಿನ ಪ್ರೀತಿ ಹೆಚ್ಚುತ್ತಿದ್ದು, ತುಳು ಚಟುವಟಿಕೆ ಅಧಿಕಗೊಂಡಿವೆ. ಮಾತೃಭಾಷೆಯಾಗಿ ತುಳು ಮಾತನಾಡುವವರ ಸಂಖ್ಯೆ 19 ಲಕ್ಷ ಎಂದರೂ, ಜಗತ್ತಿನಲ್ಲಿ ತುಳು ಬಲ್ಲವರ ಸಂಖ್ಯೆ ಕೋಟಿಗೂ ಅಧಿಕವಿದೆ ಎಂದು ಅವರು ಹೇಳಿದರು. ಜನಪದ ಸಾಹಿತ್ಯದ ಬಗ್ಗೆ ಯಾವುದೇ ಕೀಳರಿಮೆ ಬೇಡ. ಇದು ಮೂಢನಂಬಿಕೆ ಎಂಬ ಭಾವನೆ ಸಲ್ಲದು. ಇತಿಹಾಸವನ್ನು ನೋಡಿದರೆ ರಾಜಪ್ರಭುತ್ವದ ಪ್ರಭಾವ ಕಾಣುತ್ತದೆ. ಬುದ್ಧಿವಂತರು ಬರೆದ, ಬರೆಸಿದ ದಾಖಲೆ ಅದು. ಆದರೆ ಜನಪದ ಬದುಕಿನ ನೇರ ಚಿತ್ರಣ ನೀಡುತ್ತದೆ. ಭಾವನೆಗಳೇ ಮೌಖಿಕವಾಗಿ ಬೆಳೆದುಕೊಂಡು ಬಂದಿದೆ. ಆದ್ದರಿಂದ ತುಳು ಜಾನಪದವನ್ನು ಅಧ್ಯಯನ ಮಾಡಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದರು.
ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ರೆ.ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ತುಳು ಭಾಷೆ ಮತ್ತು ಜನಪದ ಅತ್ಯಂತ ಮಹತ್ವದ್ದು. ಮಾತೃಭಾಷೆಯ ಮೇಲೆ ನಮಗೆ ಅಭಿಮಾನ ಇರಬೇಕು. ಭಾಷೆಯನ್ನು ದ್ವೇಷಿಸಬಾರದು ಎಂದರು.
ಪ್ರಾಂಶುಪಾಲ ಪ್ರೊ.ಲಿಯೋ ನೊರೊನ್ಹಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ, ಮಾನವಿಕ ಸಂಘದ ನಿರ್ದೇಶಕ ಝುಬೇರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಕೇಶ್ ರಾವ್ ವಂದಿಸಿ, ಅಕ್ಷತಾ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡೋತ್ಸವದಲ್ಲಿ ತುಳುವಿನ ಜನಪದ ಆಟವಾಗಿರುವ ಗೋಣಿ ಚೀಲ ಓಟ, ಮಡಕೆ ಒಡೆಯುವುದು, ಹಾಳೆ ಎಳೆಯುವುದು,ತೆಂಗಿನ ಕಾಯಿ ಕುಟ್ಟುವುದು, ಚೆನ್ನೆಮಣೆ ಆಟ., ಲಗೋರಿ, ಲಿಂಬೆ ಚಮಚ ಓಟ,ಸೂಜಿ ದಾರ ಆಟ,ಚಿತ್ರ ಬಿಡಿಸುವುದು ಇನ್ನಿತರ ಆಟಗಳ ಸ್ಪರ್ಧೆಯನ್ನು ನಡೆಸಲಾಯಿತು. ಫೋಟೋ: ಕಲಸೆಗೆ ಭತ್ತ ಸುರಿಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು.