ಸುಳ್ಯ: ತಡೆಗೋಡೆ ವಿವಾದ: ಲೋಕಾಯುಕ್ತರಿಂದ ತನಿಖೆ
ಸುಳ್ಯ: ಸುಳ್ಯದ ಕೆರೆಮೂಲೆ ವಾರ್ಡಿನ ಖಾಸಗಿ ಜಮೀನಿನಲ್ಲಿ ತಡೆಗೋಡೆ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಲೋಕಾಯುಕ್ತದ ತನಿಖಾಧಿಕಾರಿ ಆಗಮಿಸಿ ಸ್ಥಳ ತನಿಖೆ ನಡೆಸಿದರು.
ಕೆರೆಮೂಲೆಯಲ್ಲಿ ರಸ್ತೆ ಬದಿ ತಡೆಗೋಡೆ ನಿರ್ಮಿಸಿದ ಸ್ಥಳ ಖಾಸಗಿಯವರಿಗೆ ಸೇರಿದ್ದು, ಕಾಮಗಾರಿ ಕೂಡಾ ಕಳಪೆಯಾಗಿದೆ ಎಂದು ಸ್ಥಳೀಯ ಹರಿಣಿ ಶೆಟ್ಟಿ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಕುರಿತು ಲೋಕಾಯುಕ್ತದ ಬೆಂಗಳೂರಿನ ಕಚೇರಿಯಿಂದ ತನಿಖಾಧಿಕಾರಿ ಜಿ.ಗಣೇಶ್ ರಾವ್ ಎಂಬವರು ಮಂಗಳವಾರ ಸುಳ್ಯಕ್ಕೆ ಆಗಮಿಸಿ ಸ್ಥಳ ಪರಿಶಿಲನೆ ನಡೆಸಿದರು. ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಎಂಜಿನಿಯರ್ ಶ್ರೀದೇವಿ ಅವರೊಂದಿಗೆ ಸ್ಥಳದ ಮಾಹಿತಿ ಪಡೆದ ತನಿಖಾಧಿಕಾರಿ ಕಾಮಗಾರಿಯ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿದರು. ತಡೆಗೋಡೆ ನಿರ್ಮಿಸಿದ ಸ್ಥಳ ಸರ್ಕಾರಿ ಜಮೀನು ಎಂದು ದಾಖಲೆಗಳ ಮೂಲಕ ಖಚಿತ ಪಡಿಸಿದ ಅವರು ಕಾಮಗಾರಿ ಗುಣಮಟ್ಟವು ಕಳಪೆಯಾಗಿಲ್ಲ ಎಂದು ಖಚಿತಪಡಿಸಿಕೊಂಡರು. ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಸದಸ್ಯರಾದ ಗಿರೀಶ್ ಕಲ್ಲುಗದ್ದೆ, ಕಿರಣ ಕುರುಂಜಿ ಮೊದಲಾದವರಿದ್ದರು.
ರಸ್ತೆ ಬದಿ ಚರಂಡಿ ಇಲ್ಲದೆ ಇರುವುದು, ಚರಂಡಿ ನೀರು ರಸ್ತೆಯಲ್ಲಿಯೆ ಹರಿಯುವುದು, ಮೊದಲಾದ ಸಮಸ್ಯೆಗಳ ಬಗ್ಗೆಯೂ ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದು, ಬಳಿಕ ತಾತ್ಕಾಲಿಕವಾಗಿ ಪೈಪ್ ಮೂಲಕ ಕೊಳಚೆ ನೀರನ್ನು ಸಾಗಿಸುವ ಕುರಿತು ಮಾತುಕತೆ ನಡೆಯಿತು. ಒಳಚರಂಡಿ ಕಾಮಗಾರಿ ವಿಸ್ತರಣೆ ಸಂದರ್ಭ ಎಲ್ಲಾ ಮನೆಗಳ ಶೌಚದ ನೀರನ್ನು ಒಳಚರಂಡಿಗೆ ಸಂಪರ್ಕಿಸಲಾಗುತ್ತದೆ ಎಂದು ಪ್ರಕಾಶ್ ಹೆಗ್ಡೆ ತಿಳಿಸಿದರು.