ಕಾರ್ಕಳ : ಪುರಸಭೆ: 30 ತಿಂಗಳಲ್ಲಿ 30 ಕೋಟಿ ರೂ. ಅಭಿವೃದ್ದಿ - ರೆಹಮತ್ ಎನ್.ಶೇಖ್
ಕಾರ್ಕಳ : ಕಾಂಗ್ರೆಸ್ ಪಕ್ಷದ ಮೂವತ್ತು ತಿಂಗಳ ಆಡಳಿತಾವಧಿಯಲ್ಲಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 30 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಿದ್ದೇವೆ ಎಂದು ಕಾರ್ಕಳ ಪುರಸಭೆ ಅಧ್ಯಕ್ಷೆ ರೆಹಮತ್ ಎನ್.ಶೇಖ್ ಹೇಳಿದ್ದಾರೆ. ಅವರು ಪುರಸಭೆಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ಬಾಹುಬಲಿ ಮಸ್ತಕಾಭಿಷೇಕ ಹಿನ್ನೆಲೆಯಲ್ಲಿ 17 ಕೋಟಿ ರೂ. ಬಿಡುಗಡೆ ಮಾಡಿದ್ದು, ನಗರಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ. ಘನತ್ಯಾಜ್ಯ ವಿಲೇವಾರಿಗಾಗಿ ಎರಡು ಆಟೋ ಟಿಪ್ಪರ್ ಮತ್ತು 407 ವಾಹನ ಖರೀದಿಸಿದ್ದು, ದಾನಿಗಳ ನೆರವಿನಿಂದ ಮಹೀಂದ್ರ ಪಿಕಪ್ ವಾಹನವು ಪುರಸಭೆಗೆ ದೊರೆತಿದೆ. ಘನ ತ್ಯಾಜ್ಯ ನಿರ್ವಹಣೆಯಲ್ಲಿ ಪುರಸಭೆಯು ರಾಜ್ಯದಲ್ಲೇ ಮುಂಚೂಣಿಯಲ್ಲಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಕೂಡಾ ನಾವು ಪಡೆದುಕೊಂಡಿದ್ದೇವೆ ಎಂದರು.
ಉಡುಪಿ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ 37 ಲಕ್ಷ ರೂ.ನ ಬಯೋಗ್ಯಾಸ್ ಘಟಕ, ಎರೆಹುಳು ಗೊಬ್ಬರ ಘಟಕ ನಿರ್ಮಿಸಿದ್ದೇವೆ. ಅನುಸೂಚಿತ ಜಾತಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಒಟ್ಟು 2.30 ಲಕ್ಷ ರೂ, ಮೊತ್ತದ ವಿದ್ಯಾರ್ಥಿವೇತನ ನೀಡಿದ್ದೇವೆ. ಅನುಸೂಚಿತ ಜಾತಿ ಮತ್ತು ಪುರಸಭೆ ಕಾರ್ಮಿಕರ ಕುಟುಂಬ ವಿಮೆಯ ಬಗ್ಗೆ 2.84 ಲಕ್ಷ ರೂ. ಪಾವತಿಸಿದ್ದೇವೆ. 10 ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚಕ್ಕಾಗಿ 50 ಸಾವಿರವನ್ನು ನೀಡಿದ್ದೇವೆ. ತೆರೆದ ಬವಿ ನಿರ್ಮಾಣಕ್ಕೆ 14.50 ಲಕ್ಷ ರೂ. ಕಾದಿರಿಸಿ ಹಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
50 ಲಕ್ಷ ರೂ. ವೆಚ್ಚದಲ್ಲಿ ಕಾಬೆಟ್ಟು ಸೇತುವೆ ಕಾಮಗಾರಿಯು ಮುಕ್ತಾಯದ ಹಂತದಲ್ಲಿದೆ. ಬಿಬಿಎಂ ಕಾಲೇಜು ಬಳಿ ತಡೆಗೋಡೆ ನಿರ್ಮಾಣಕ್ಕೆ 20 ಲಕ್ಷ ರೂ., ಗಾಂಧಿ ಮೈದಾನದಲ್ಲಿ 25 ಲಕ್ಷ ರೂ. ವೆಚ್ಚದ ರಂಗಮಂದಿರ, 51 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಸಂಕೀರ್ಣ ಕಾಮಗಾರಿ ಪ್ರಗತಿಯಲ್ಲಿದೆ. ಬಂಗ್ಲೆಗುಡ್ಡೆ ಜಂಕ್ಷನ್‌ನಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ಬಸ್ ವೇ ನಿರ್ಮಿಸಲಾಗಿದೆ ಎಂದರು. ಇನ್ನಿತರ ಅಭಿವೃದ್ದಿ: ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಮೂರು ಹಾಸ್ಟೆಲ್‌ಗಳಿಗೆ ಮೂಲಭೂತ ಸೌಕರ್ಯಗಳಿಗಾಗಿ 4.52 ಲಕ್ಷ ರೂ. ಕಾದಿರಿಸಲಾಗಿದೆ. ಸರಕಾರಿ ಜೂನಿಯರ್ ಕಾಲೇಜಿನ ಶೌಚಾಲಯಕ್ಕೆ 2 ಲಕ್ಷ ರೂ, ಕಾಬೆಟ್ಟು ಶಾಲೆಗೆ ಪ್ರೊಜೆಕ್ಟರಿಗೆ 75 ಸಾವಿರ ರೂ, ಸಮುದಾಯ ಭವನ ದುರಸ್ತಿಗೆ 1 ಲಕ್ಷ ರೂ, 9.50 ಲಕ್ಷ ವೆಚ್ಚದಲ್ಲಿ ರಾಮಸಮುದ್ರ ಬಳಿ ಸಾರ್ವಜನಿಕ ಸ್ಮಶಾನ ಅಭಿವೃದ್ಧಿ, ಕಟ್ಟೆಮಾರು ಪಾದೆಯಲ್ಲಿ 9.20 ಲಕ್ಷ ವೆಚ್ಚದಲ್ಲಿ ಹಾಲಿಯಿರುವ ಅಕ್ಸಿಡೇಷನ್ ಪಾಂಡ್‌ಗಳ ನಿರ್ವಹಣೆ ಮತ್ತು ದುರಸ್ತಿ, ಮಂಗಳೂರು ರಸ್ತೆ ಗಾಂಧಿ ಮೈದಾನ ತಿರುವುನಿಂದ ಆನೆಕೆರೆ ಮಸೀದಿವರೆಗೆ ಇಂಟರ್‌ಲಾಕ್ ಅಳವಡಿಕೆ, ಅಡುಗೆ ಅನಿಲ ವಿತರಣೆ, ವಿದ್ಯಾರ್ಥಿವೇತನ ವಿತರಣೆ, ಕಂಪ್ಯೂಟರ್ ವಿತರಣೆ, ಸಾಲ ಮನ್ನಾ ಪತ್ರ ವಿತರಣೆ, ಸೈಟ್ ವಿತರಣೆ ಮಾಡಲಾಗಿದ್ದು, 19 ಮಂದಿಗೆ ವಾಹನ ಚಾಲನೆ ತರಬೇತಿಯೊಂದಿಗೆ ಪರವಾನಿಗೆ ನೀಡಲಾಗಿದೆ.
73 ಬೀದಿ ವ್ಯಾಪಾರಿಗಳಿಗೆ ಗುರುತು ಚೀಟಿ, ರಾಣೇರ ಕಾಲೋನಿಯಲ್ಲಿ ಆರ್‌ಟಿಸಿ ಇಲ್ಲದವರಿಗೆ ಈಗ ಆರ್‌ಟಿಸಿ(ಸದಸ್ಯರಾದ ಸುಭಿತ್ ಕುಮಾರ್ ಮತು ಪ್ರತಿಮಾ ಅವರ ಪ್ರಯತ್ನದಿಂದ) ಸಿಗುವ ಹಂತದಲ್ಲಿದೆ. ಅದಲ್ಲದೆ ಬಂಗ್ಲೆಗುಡ್ಡೆ ಮತ್ತು ಕಾಬೆಟ್ಟಿನಲ್ಲಿ ರಿಕ್ಷಾ ಸ್ಟ್ಯಾಂಡ್ ನಿರ್ಮಾಣ, ಬಂಗ್ಲೆಗುಡ್ಡೆಯಲ್ಲಿ 1 ಬಸ್‌ಸ್ಟಾಪ್ ನಿರ್ಮಾಣ ಮುಂತಾದ ಅಭಿವೃದ್ದಿ ಕಾರ್ಯಗಳು ನಡೆದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ, ಸದಸ್ಯರಾದ ಸುಭಿತ್ ಎನ್.ಆರ್, ಮೊಹಮ್ಮದ್ ಶರೀಫ್, ವಿನ್ನಿಬೋಲ್ಡ್ ಮೆಂಡೋನ್ಸಾ, ಶಾಂತಿ ಶೆಟ್ಟಿ, ಅಕ್ಷಯ್, ಪ್ರತಿಮಾ ಮೋಹನ್ ರಾಣೆ, ಸುನಿಲ್ ಕೋಟ್ಯಾನ್, ವಂದನ್ ಜತ್ತನ್ನ ಉಪಸ್ಥಿತರಿದ್ದರು.