ಕಾರ್ಕಳ : ಶ್ರೇಷ್ಠ ಅಪಾರ್ಟ್‌ಮೆಂಟ್‌ಗೆ ನೋಟೀಸ್
ಕಾರ್ಕಳ : ತ್ಯಾಜ್ಯ ನೀರು ಸೋರಿಕೆಯಾಗುತ್ತಿರುವ ಕುರಿತು ಶ್ರೇಷ್ಠ ಅಪಾರ್ಟ್‌ಮೆಂಟ್ ಕಟ್ಟಡದ ಮಾಲಿಕರು ಹಾಗೂ ಅಲ್ಲಿ ವಾಸವಾಗಿರುವ ನಿವಾಸಿಗಳಿಗೆ ಕಾರ್ಕಳ ಪುರಸಭೆ ಅಂತಿಮ ನೋಟೀಸ್ ಜಾರಿ ಮಾಡಿದೆ.
ಕಟ್ಟಡದ ಒಳಚರಂಡಿ ಸಂಪರ್ಕಕ್ಕೆ ನೀಡಿರುವ ಪೈಪುಗಳು ಮತ್ತು ಸಂಬಂಧಿತ ಶೇಖರಣಾ ತೊಟ್ಟಿಗಳು ತೀರಾ ನಾ-ದುರಸ್ತಿಯಲ್ಲಿದ್ದು, ಈ ಬಗ್ಗೆ ಮೌಖಿಕವಾಗಿ ಹಲವು ಬಾರಿ ತಿಳಿಸಲಾಗಿದೆ. ಮುಖ್ಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದೂರುದಾರರು ಮತ್ತು ಕಟ್ಟಡದ ನಿವಾಸಿಗಳ ಸಭೆ ನಡೆಸಿ, ಸರಿಪಡಿಸುವಂತೆ ಎರಡು ತಿಂಗಳು ಕಾಲವಕಾಶ ನೀಡಿದ್ದರೂ, ಯಾವುದೇ ಪ್ರತಿಕ್ರಿಯೆ ನೀಡದಿರುವುದು ಈ ನೋಟೀಸ್‌ಗೆ ಮುಖ್ಯ ಕಾರಣವಾಗಿದೆ.
ಮುಂದೆ ಏಳು ದಿನಗಳ ಕಾಲವಕಾಶ ನೀಡಿ ಈ ನೋಟೀಸ್ ಜಾರಿ ಮಾಡಲಾಗಿದ್ದು, ತ್ಯಾಜ್ಯ ನೀರಿನ ಫಿಟ್ ತಮ್ಮ ಕಟ್ಟಡದ ಆವರಣದೊಳಗಿನ ಲಭ್ಯ ಸ್ಥಳಕ್ಕೆ ಸ್ಥಳಾಂತರಿಸಿ ನೂತನ ವೈಜ್ಞಾನಿಕ ಫಿಪ್ ನಿರ್ಮಿಸುವಂತೆ, ಸದ್ರಿ ಕಾಮಗಾರಿ ಮುಗಿಯುವವರೆಗೆ ಹಾಲಿ ಇರುವ ತ್ಯಾಜ್ಯ ಫಿಟ್ ಶುಚಿಗೊಳಿಸಿ ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಪುರಸಭೆ ಕಾಯ್ದೆ ಪ್ರಕಾರ ಕಟ್ಟಡದಲ್ಲಿರುವ ಉದ್ದಿಮೆ ಪರವಾನಿಗೆ ಮತ್ತು ಕಟ್ಟಡ ನಂಬ್ರಗಳನ್ನು ರದ್ದುಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಮುಂದಿನ ಎಲ್ಲಾ ಆಗು-ಹೋಗುಗಳಿಗೆ ಕಟ್ಟಡ ಮಾಲಿಕರೇ ಜವಾಬ್ದಾರರು ಎಂಬುವುದಾಗಿ ಮುಖ್ಯಾಧಿಕಾರಿ ರಾಯಪ್ಪ ನೋಟೀಸ್ ನೀಡುವ ಮೂಲಕ ಎಚ್ಚರಿಸಿದ್ದಾರೆ.