×
Ad

ಮಾ.19 ಮತ್ತು 20 ಮುಟ್ಲುಪಾಡಿಯಲ್ಲಿ ಅಖಿಲ ಭಾರತಮಟ್ಟದ ಕಬಡ್ಡಿ ಪಂದ್ಯಾಟ

Update: 2016-03-15 18:37 IST

ಕಾರ್ಕಳ :ಅರ್ಧನಾರೀಶ್ವರ ಸ್ಪೋಟ್ಸ್ ಕ್ಲಬ್ ಮುಟ್ಲುಪಾಡಿ ಆಶ್ರಯದಲ್ಲಿ ಯುವ ಉದ್ಯಮಿ ಗಿರೀಶ್ ಶೆಟ್ಟಿ ನೇತೃತ್ವದಲ್ಲಿ ಕರ್ನಾಟಕ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಹಾಗೂ ಭಾರತೀಯ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಅಖಿಲ ಭಾರತಮಟ್ಟದ ಹೊನಲು ಬೆಳಕಿನ ಪ್ರೊ.ಕಬಡ್ಡಿ ಪಂದ್ಯಾಟವು ಮುನಿಯಾಲು ಗಾಂಧೀಮೈದಾನದಲ್ಲಿ ಮಾ.19 ಮತ್ತು 20ರಂದು ನಡೆಯಲಿದೆ.

ಈಗಾಗಲೇ ಕಳೆದ ಹತ್ತು ದಿನಗಳಿಂದ ಮುನಿಯಾಲು ಸುತ್ತಮುತ್ತಲಿನ ನೂರಾರು ಸ್ವಯಂಸೇವಕರು ಕ್ರೀಡಾಂಗಣ ಸಿದ್ದತೆಯ ಕೆಲಸದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಕೊಲ್ಲಾಪುರ ಜಿಲ್ಲೆಯ ಈಚಲ ಕಾರಂಜಿ ಸಾಯಿ ಗ್ಯಾಲೇರಿ ಕಂಪೆನಿಯ ಸಿಬ್ಬಂದಿಗಳು ಗ್ಯಾಲೇರಿ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

 ಮಹಾರಾಷ್ಟ್ರ, ತಮಿಳುನಾಡು, ಹೊಸದಿಲ್ಲಿ, ಕೇರಳ, ಹರಿಯಾಣ ಸೇರಿದಂತೆ ದೇಶದ 30ಕ್ಕೂ ಅಧಿಕ ಪ್ರಮುಖ ತಂಡಗಳು ಪಾಲ್ಗೊಳ್ಳಲಿದ್ದು, ಮಂಗಳೂರು ಮತ್ತು ಉಡುಪಿಯ ತಂಡಗಳಿಗೂ ಅವಕಾಶ ನೀಡಲಾಗಿದೆ. ಪ್ರೊ. ಕಬಡ್ಡಿಯ ಸ್ಟಾರ್ ಆಟಗಾರರಾದ ಯು.ಮುಂಬಾ ತಂಡದ ಶಭೀರ್ ಬಾಪು, ತೆಲುಗು ಟೈಟಾನ್‌ನ ರಾಹುಲ್ ಚೌಂದರಿ, ಜೈಪುರ್ ಪಿಂಕ್ ಪ್ಯಾಂಥರ್ಸ್‌ನ ಜಗದೀಶ್ ಕುಂಬ್ಳೆ, ಅಜಯ್ ಠಾಕೂರ್, ಪ್ರದೀಪ್ ನರ್ವಾಲ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ತೆಲುಗು ಟೈಟಾನ್ ತಂಡವನ್ನು ಪ್ರತಿನಿಧಿಸಿದ ಕಾರ್ಕಳ ತಾಲೂಕಿನ ಕಡ್ತಲ ಸುಕೇಶ್ ಹೆಗ್ಡೆ ಅವರಿಗೆ ಸನ್ಮಾನ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಭಾರತದ ಕ್ರಿಕೆಟ್ ತಂಡ ಮಾಜಿ ನಾಯಕ್ ಅಜರುದ್ದೀನ್ ಹಾಗೂ ಚಿತ್ರನಟಿಯರು ಭಾಗವಹಿಸಲಿದ್ದಾರೆ.

4.10 ಲಕ್ಷ ರೂ. ಬಹುಮಾನ:

ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅಖಿಲ ಭಾರತಮಟ್ಟದ ಪ್ರೊ. ಕಬಡ್ಡಿ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಆಕರ್ಷಕ ಬಹುಮಾನವನ್ನು ವಿಜೇತರಿಗೆ ಘೋಷಿಸಲಾಗಿದೆ. ಪ್ರಥಮ 2 ಲಕ್ಷ ರೂ, ದ್ವಿತೀಯ-1.50ಲಕ್ಷ ರೂ ಮತ್ತು ತೃತೀಯ ಹಾಗೂ ಚತುರ್ಥ ತಲಾ 80 ಸಾವಿರ ರೂ. ಒಟ್ಟು 4.10 ಲಕ್ಷ ರೂ. ನಗದು ಹಾಗೂ ಪ್ರಶಸ್ತಿಪತ್ರಗಳು ವಿಜೇತರ ಪಾಲಾಗಲಿದೆ. ಸುಮಾರು 4 ಎಕರೆ ವಿಶಾಲವಾದ ಮೈದಾನದಲ್ಲಿ 10 ಸಾವಿರ ಜನ ಕುಳಿತುಕೊಳ್ಳುವ ಗ್ಯಾಲರಿ ಹಾಗೂ 6 ಸಾವಿರ ಜನ ಕುಳಿತುಕೊಳ್ಳುವ ಆಸನ ವ್ಯವಸ್ಥೆ ಮಾಡಲಾಗಿದ್ದು, 20 ಸಾವಿರಕ್ಕೂ ಮಿಕ್ಕಿದ ಪ್ರೇಕ್ಷಕರು ಭಾಗವಹಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News