ಕಾರ್ಕಳ ಪೌರ ಕಾರ್ಮಿಕರ ಪರಿಶ್ರಮದಿಂದ ಪುರಸಭೆಯ ಅಗತ್ಯ ಕೆಲಸಗಳು ಸರಾಗವಾಗಿ ನಡೆಯುತ್ತಿದೆ : ರಾಯಪ್ಪ
ಕಾರ್ಕಳ ಪೌರ ಕಾರ್ಮಿಕರ ಪರಿಶ್ರಮದಿಂದ ಪುರಸಭೆಯ ಅಗತ್ಯ ಕೆಲಸಗಳು ಸರಾಗವಾಗಿ ನಡೆಯುತ್ತಿದ್ದು, ಆಡಳಿತ ಯಶಸ್ಸಿಗೆ ಅವರ ಸೇವೆ ಅನನ್ಯ ಎಂದು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಹೇಳಿದ್ದಾರೆ.
ಅವರು ಕಾರ್ಕಳ ಪುರಸಭೆಯಲ್ಲಿ ಮಂಗಳವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಅವರದ್ದು ತೃಪ್ತಿಕರ ಕೆಲಸ. ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಬಗ್ಗೆ ಅವರು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಇತರ ಕೆಲಸಗಳಲ್ಲೂ ಅವರು ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೆ ಬೇಕಾದ ಸೌಲಭ್ಯಗಳನ್ನು ಪುರಸಭೆ ವತಿಯಿಂದ ನೀಡಲು ನಾವು ಪ್ರಯತ್ನಿಸಿದ್ದು, ಪ್ರಸ್ತುತ ಅಗತ್ಯ ವಸ್ತುಗಳನ್ನು ನೀಡಿ ಸಹಕರಿಸಿದ್ದೇವೆ ಎಂದರು.
ಪುರಸಭೆ ಅಧ್ಯಕ್ಷೆ ರೆಹಮತ್ ಎನ್.ಶೇಖ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಶಿಕಲ ರಾಣೆ, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 30ಕ್ಕೂ ಮಿಕ್ಕಿದ ಪೌರ ಕಾರ್ಮಿಕರಿಗೆ ಬಟ್ಟೆ ಹಾಗೂ ಇನ್ನಿತರರ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಲಾಯಿತು. ಪುರಸಭೆ ಆರೋಗ್ಯ ಪರಿವೀಕ್ಷಕ ಸುಂದರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.