×
Ad

ನೇತ್ರಾವತಿ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮಾ.17ರಂದು ದ.ಕ ಜಿಲ್ಲಾಧಿಕಾರಿ ಕಚೇರಿಯೆದುರು ಉಪವಾಸ ಸತ್ಯಾಗ್ರಹ

Update: 2016-03-15 19:19 IST

ಮಂಗಳೂರು, ಮಾ.15: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನೇತೃತ್ವದಲ್ಲಿ ಮಾ.17 ರಂದು ದ.ಕ ಜಿಲ್ಲಾಧಿಕಾರಿ ಕಚೇರಿಯೆದುರು ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಆಯೋಜಿಸಲಾಗಿದೆ ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಮುಖಂಡ ಎಂ.ಜಿ. ಹೆಗ್ಡೆ ಹೇಳಿದರು. ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಎತ್ತಿನಹೊಳೆ ಯೋಜನೆಯನ್ನು ಕೈಬಿಡಬೇಕು, ನೇತ್ರಾವತಿ ರಕ್ಷಣಾ ಪ್ರಾಧಿಕಾರ ರಚಿಸಬೇಕು, ಸಮಗ್ರ ನೀರಾವರಿ ಯೋಜನೆಯನ್ನು ಘೋಷಿಸಬೇಕು, ಮಂಗಳೂರನ್ನು ಕೈಗಾರಿಕಾ ಸೂಕ್ಷ್ಮ ವಲಯ ಮಾಡುವ ಸಂಚನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಬಜೆಟ್ ಮಂಡನೆಗೆ ಮುಂಚೆ ಈ ಬಗ್ಗೆ ಗಮನಸೆಳೆಯಲು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

  ಎತ್ತಿನಹೊಳೆ ಯೋಜನೆಗೆ 20 ಸಾವಿರ ಕೋಟಿ ಘೋಷಿಸಿ ಇದೀಗ ಶರಾವತಿ ನೀರಿನ ಮೇಲೆ ಸರಕಾರ ಕಣ್ಣಿಟ್ಟಿದೆ. ಎತ್ತಿನಹೊಳೆಯಿಂದ ನೀರು ಸಿಗುವುದಿಲ್ಲ ಎಂಬ ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸರಕಾರ ಹುಡುಕುತ್ತಿದೆ ಎಂದು ಹೇಳಿದರು.

  ಕರಾವಳಿಯು ಕರ್ನಾಟಕದ ಭಾಗವೆ ಎಂಬ ಸಂಶಯ ಬರುತ್ತಿದೆ. ಸರಕಾರ ಕರಾವಳಿ ಭಾಗದ ನೀರಾವರಿ ಸಮಸ್ಯೆ ಬಗ್ಗೆ ಚರ್ಚೆಗೆ ತಯಾರಿಲ್ಲ. ಕರಾವಳಿಯನ್ನು ರಾಜ್ಯ ಸರಕಾರ ಸಂಪೂರ್ಣ ಕಡೆಗಣನೆ ಮಾಡುತ್ತಿದೆ. ಎತ್ತಿನಹೊಳೆ ಯೋಜನೆ, ಭೂತಾರಾಧನೆ , ಕಂಬಳಕ್ಕೆ ತಡೆಯೊಡ್ಡಿ ಕರಾವಳಿಯನ್ನು ಕೃಷಿಗೆ ಅಯೋಗ್ಯ ಭೂಮಿ ಎಂದು ಮಾಡಿ ಮಂಗಳೂರನ್ನು ಕೈಗಾರಿಕಾ ವಲಯವನ್ನಾಗಿ ಘೋಷಿಸುವ ಸಂಚನ್ನು ರೂಪಿಸುತ್ತಿದ್ದಾರೆ ಎಂದು ಹೇಳಿದರು.

  ಪತ್ರಿಕಾಗೋಷ್ಟಿಯಲ್ಲಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಮುಖಂಡರುಗಳಾದ ರಾಮಚಂದ್ರ ಬೈಕಂಪಾಡಿ, ಶಶಿರಾಜ್ ಶೆಟ್ಟಿ ಕೊಳಂಬೆ, ಯೋಗೀಶ್ ಶೆಟ್ಟಿ ಜೆಪ್ಪು, ಆನಂದ್ ಶೆಟ್ಟಿ, ರಹೀಂ ಉಚ್ಚಿಲ್, ಸಿರಾಜ್, ರೋಹಿತ್‌ಕುಮಾರ್, ಜೆರಾಲ್ಡ್, ಆನಂದ್ ಅಮೀನ್ ಅಡ್ಯಾರ್, ದಿನಕರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News