ಕಡಬ: ಮರಳು ನೀತಿಯಲ್ಲಿ ಸರಕಾರದ ತಾರತಮ್ಯ ಆರೋಪ
ಕಡಬ, ಮಾ.15. ಇತ್ತೀಚಿನ ದಿನಗಳಲ್ಲಿ ಮರಳು ಸಾಗಾಣೆಯನ್ನು ಕಾನೂನಿನ ಚೌಕಟ್ಟಿನೊಳಗೆ ಒಳಪಡಿಸಿ ಸರಕಾರ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿದೆ, ಇದರಿಂದ ಮುಖ್ಯವಾಗಿ ಬಡವರ್ಗದವರಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಚರ್ಚಿಸಲು ಮಾ.20ರಂದು ಕಡಬ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರ ಸಭೆ ಕರೆಯಲಾಗಿದೆ ಎಂದು ಸಾರ್ವಜನಿಕರ ಪರವಾಗಿ ಕಡಬ ಸಿ.ಎ. ಬ್ಯಾಂಕ್ ಮಾಜಿ ನಿರ್ದೇಶಕ ಎ.ಪಿ.ಚೆರಿಯನ್ ಹಾಗೂ ಕುಟ್ರುಪಾಡಿ ಗ್ರಾ.ಪಂ. ಮಾಜಿ ಸದಸ್ಯ ಕ್ಷೇವಿಯರ್ ಬೇಬಿ ತಿಳಿಸಿದ್ದಾರೆ.
ಅವರು ಮಾ.15ರಂದು ಕಡಬದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದ.ಕ ಜಿಲ್ಲೆ ಹಳ್ಳಿಗಾಡು ಪ್ರದೇಶ. ಹೆಚ್ಚಾಗಿ ಇರುವ ಕೃಷಿಕರು ಮನೆ ದುರಸ್ಥಿ, ನವೀಕರಣ, ಹಟ್ಟಿ-ಕೊಟ್ಟಿಗೆ ರಚನೆ, ಶೌಚಾಲಯ ರಚನೆ ಹಾಗೂ ಸರಕಾರದಿಂದ ಅನುದಾನ ಪಡೆದ ಅರ್ಹ ಫಲಾನುಭವಿಗಳು ಗೃಹ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಸರ್ವೇ ಸಾಮಾನ್ಯ. ಇವುಗಳಿಗೆ ಬೇಕಾದ ಕಚ್ಚಾ ಸಾಮಾಗ್ರಿಗಳಲ್ಲಿ ಒಂದಾದ ಮರಳನ್ನು ತನ್ನ ಬೇಡಿಕೆಗನುಸಾರವಾಗಿ ಸಮೀಪದ ಹಳ್ಳದಿಂದ ಯಾ ಹೊಳೆಗಳಿಂದ ಕ್ರೋಡೀಕರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರ ಮರಳು ಸಾಗಾಟವನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸಿ ತೀವ್ರವಾಗಿ ಹಸ್ತಕ್ಷೇಪ ಮಾಡುತ್ತಿರುವುದು ಜನರಿಗೆ ಆತಂಕ ಮತ್ತು ಆಕ್ರೋಶವನ್ನು ಸೃಷ್ಟಿಸಿದೆ. ನಿರಂತರವಾಗಿ ಮರಳು ದಂಧೆಯನ್ನು ಮಾಡಿ ಕೋಟಿ ವ್ಯವಹಾರ ನಡೆಸುತ್ತಿರುವವರ ಮೇಲೆ ಕ್ರಮ ಜರುಗಿಸದೆ, ಸಣ್ಣ ವಾಹನಗಳಾದ ಪಿಕ್-ಅಪ್, 407-ಟೆಂಪೋಗಳ ಮೇಲೆ ಹಳ್ಳಿಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಕಾನೂನು ಕ್ರಮ ಜರುಗಿಸುತ್ತಿದ್ದು ಇದನ್ನು ಚುನಾಯಿತ ಪ್ರತಿನಿಧಿಗಳು ಮೂಕ ಪ್ರೇಕ್ಷಕರಾಗಿ ವರ್ತಿಸುವುದು ತೀವ್ರ ಅಸಹಣೆ ವಿಷಯ. ಸರಕಾರ ಮರಳು ಡಿಪೋವನ್ನು ರಚಿಸಿ ಪಂಚಾಯತ್‌ನ ಅನುಮತಿ ಮೇರೆಗೆ ಲೋಕೋಪಯೋಗಿ ಇಲಾಖೆಯ ನಿರ್ದೇಶನದಂತೆ ಮರಳು ವಿತರಣೆಯನ್ನು ರೇಶನ್ ಮಾದರಿಯಲ್ಲಿ ಕೊಡಲು ತೀರ್ಮಾನಿಸಿರುವುದು ಖಂಡನೀಯ. ಈ ಬಗ್ಗೆ ಜನಗಳು ತೀವ್ರ ಆಕ್ರೋಶಗೊಂಡಿದ್ದು ಅಲ್ಲಲ್ಲಿ ಅಪಸ್ವರ ಕೇಳಿಬರುತ್ತಿದೆ. ಆದುದರಿಂದ ಮುಂದಿನ ದಿನಗಳಲ್ಲಿ ಜನ ಸಾಮಾನ್ಯರಿಗೆ ಕೈಗೆಟಕುವಂಥ ನೀತಿ-ನಿಯಮವನ್ನು ರೂಪಿಸಲು ಸರಕಾರವನ್ನು ಒತ್ತಾಯಿಸುವ ಸಲುವಾಗಿ ಚರ್ಚಿಸಲು ಮಾ. 20ರಂದು ಅಪರಾಹ್ನ ಕಡಬ ಅಂಬೇಡ್ಕರ್ ಸಭಾಭವನದಲ್ಲಿ ಸಭೆ ಕರೆಯಲಾಗಿದೆ. ಈ ಸಭೆಗೆ ಸಾಮಾಜಿಕ ಕಾರ್ಯಕರ್ತರು, ಜನಪ್ರತಿನಿಧಿಗಳು, ಸಣ್ಣ ವಾಹನಗಳ ಚಾಲಕ ಮಾಲಕರು ಹಾಗೂ ಮರಳು ಬೇಡಿಕೆಯಿರುವಂತಹ ಜನಗಳು ಹಾಗೂ ಊರವರು ಹಾಜರಾಗಿ ಸಲಹೆ ಸೂಚನೆಗಳನ್ನು ನೀಡಿ ಮುಂದಿನ ಕ್ರಮಕ್ಕಾಗಿ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.