ಸ್ವಚ್ಛತೆಯಲ್ಲಿ ದೇಶದಲ್ಲೇ ಮಂಗಳೂರು 3ನೆ ಸ್ಥಾನ
ಮಂಗಳೂರು, ಮಾ.15: ಭಾರತ ಸರಕಾರದ ನಗರಾಭಿವೃದ್ಧಿ ಸಚಿವಾಲಯದ ಸ್ವಚ್ಛತಾ ಶ್ರೇಯಾಂಕದಲ್ಲಿ 2013-15ನೆ ಸಾಲಿಗೆ ಮಂಗಳೂರು ನಗರ ದೇಶದಲ್ಲೇ ಮೂರನೆ ಸ್ಥಾನ ಗಳಿಸಿದ್ದು, ನಗರದ ಪಾಲಿಗೆ ಹೆಮ್ಮೆಯ ವಿಚಾರ ಎಂದು ನೂತನ ಮೇಯರ್ ಹರಿನಾಥ್ ತಿಳಿಸಿದರು.
ಮೇಯರ್ ಕೊಠಡಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೇಂದ್ರದ ನಗರಾಭಿವೃದ್ಧಿ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಬಯಲು ಮಲ ವಿಸರ್ಜನೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದು, ಮಲ ಹೊರುವ ಪದ್ಧತಿಯನ್ನು ನಿರ್ಮೂಲನಗೊಳಿಸುವುದು, ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಆಧುನಿಕ ಹಾಗೂ ವೈಜ್ಞಾನಿಕ ಪದ್ಧತಿ ಅಳವಡಿಸುವುದು, ಖಾಸಗಿ ವಲಯದ ಭಾಗವಹಿಸುವಿಕೆಗೆ ಉತ್ತೇಜನ ನೀಡುವುದು ಹಾಗೂ ಇದಕ್ಕೆ ಪೂರಕವಾದ ವಾತಾವರಣ ನಿರ್ಮಿಸುವ ವಿಷಯಗಳನ್ನು ಆಧರಿಸಿ ದೇಶದ ಒಟ್ಟು 476 ನಗರಗಳನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಮಂಗಳೂರಿಗೆ ಮೂರನೆ ಸ್ವಚ್ಛ ನಗರ ಸ್ಥಾನವೆಂದು ಶ್ರೇಯಾಂಕ ನೀಡಲಾಗಿದೆ ಎಂದು ಅವರು ಹೇಳಿದರು.
ನಗರವು ಮೂರನೆ ಶ್ರೇಯಾಂಕ ಪಡೆಯಲು ಕಾರಣರಾದ ಸ್ವಚ್ಛತಾ ಪೌರ ಕಾರ್ಮಿಕರು, ನಾಗರಿಕರು, ಮೇಯರ್, ಉಮೇಯರ್, ಮನಪಾದ ಎಲ್ಲಾ ಸದಸ್ಯರು, ಅಧಿಕಾರಿಗಲು ಹಾಗೂ ಸಿಬ್ಬಂದಿಗಳಿಗೆ ಹಾಗೂ ಹೊರಗುತ್ತಿಗೆ ಸಂಸ್ಥೆಗಳಿಗೆ ಮತ್ತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.
ನಗರದಲ್ಲಿ 339 ಮನೆಗಳಲ್ಲಿ ವೈಯಕ್ತಿಕ ಶೌಚಾಲಯವಿಲ್ಲದಿರುವುದನ್ನು ಗುರುತಿಸಲಾಗಿದ್ದು, 272 ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ವಿವಿಧ ಯೋಜನೆಗಳಡಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಮನಪಾ ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ ತಿಳಿಸಿದರು.
ನಗರದಲ್ಲಿ ಕುದ್ರೋಳಿ, ಅತ್ತಾವರ ಕೆಇಬಿ ಕಾಲನಿ ಬಳಿ, ಹೊಯ್ಗೆ ಬಜಾರ್, ಡೊಂಗಕೇರಿ ಮೊದಲಾದ ಐದು ಪ್ರದೇಶಗಳಲ್ಲಿ ಸಮುದಾಯ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದ್ದು, 2 ಕಾಮಗಾರಿಗಳು ಪ್ರಗತಿಯಲ್ಲಿವೆ. ಸಾರ್ವಜನಿಕ ಶೌಚಾಯಲಗಳನ್ನು ನಿರ್ಮಿಸಲು 50 ಪ್ರದೇಶಗಳನ್ನು ಗುರುತಿಸಲಾಗಿದೆ. 2015-16ನೆ ಸಾಲಿನಲ್ಲಿ ಉದ್ದೇಶಿತ ಐದು ಸಾರ್ವಜನಿಕ ಶೌಚಾಲಯ ನಿರ್ಮಾಣದಡಿ ವಾಮಂಜೂರಿನಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮಾರ್ನಮಿಕಟ್ಟೆ ಹಾಗೂ ಹೊಯ್ಗೆಬಜಾರ್‌ನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 2016-17ನೆ ಸಾಲಿನಲ್ಲಿ 10 ಶೌಚಾಲಯಗಳ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಅವರು ಈ ಸಂದರ್ಭ ವಿವರ ನೀಡಿದರು.
ಗೋಷ್ಠಿಯಲ್ಲಿ ಉಪ ಮೇಯರ್ ಸುಮಿತ್ರಾ ಕರಿಯ, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಸದಸ್ಯರಾದ ಶಶಿಧರ್ ಹೆಗ್ಡೆ, ದೀಪಕ್ ಪೂಜಾರಿ, ಲ್ಯಾನ್ಸಿ ಲೋಟ್ ಪಿಂಟೋ, ಪ್ರಕಾಶ್ ಸಾಲಿಯಾನ್, ಕೇಶವ ಮರೋಳಿ ಹಾಗೂ ಇತರರು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಮುಕ್ತ ಮಂಗಳೂರಿಗೆ ಕ್ರಮ
ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ಸರಕಾರದ ವತಿಯಿಂದ ಈಗಾಗಲೇ ಸಿದ್ಧತೆ ನಡೆಸಿರುವಂತೆಯೇ ಮಂಗಳೂರು ನಗರವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಲು ಸದಸ್ಯರ ಜತೆ ಚರ್ಚಿಸಿ ಸಮರ್ಪಕ ಕ್ರಮಗಳನ್ನು ಅಳವಡಿಸಲಾಗುವುದು ಎಂದು ಮೇಯರ್ ಹರಿನಾಥ್ ತಿಳಿಸಿದರು.
ಅಗತ್ಯ ಆಹಾರ ಪದಾರ್ಥಗಳನ್ನು ಸಾಗಿಸಲು ಪ್ಲಾಸ್ಟಿಕ್ ಲಕೋಟೆಗಳ ಬದಲಿಗೆ ಬಟ್ಟೆ ಚೀಲಗಳನ್ನು ಉಪಯೋಗಿಸುವ ಬಗ್ಗೆ ಜಾಗೃತಿ ಮೂಡಿಸಲು ಶಾಲೆಗಳಿಗೆ ಬಟ್ಟೆ ಚೀಲಗಳನ್ನು ಹಂಚುವ ಅಭಿಯಾನವನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.