ವಿಟ್ಲ : ಫೈನಾನ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೊಬೈಲ್ ಅಂಗಡಿ ಮಾಲಕನಿಗೆ ಹಲ್ಲೆ
ವಿಟ್ಲ : ಫೈನಾನ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯೋರ್ವನ ಸಹಿತ ನಾಲ್ವರ ತಂಡವೊಂದು ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿ ಮಾಲಕನಿಗೆ ಹಲ್ಲೆ ನಡೆಸಿ ಅಂಗಡಿ ಗಾಜುಗಳನ್ನು ಒಡೆದು ಹಾಕಿದ ಘಟನೆ ಪಾಣೆಮಂಗಳೂರು ಸಮೀಪದ ನೆಹರುನಗರ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಹಲ್ಲೆಯಿಂದ ಗಾಯಗೊಂಡಿರುವ ನೆಹರುನಗರ ನಿವಾಸಿ ಮುಹಮ್ಮದ್ ಫಯಾರ್ನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಲಾಗಿದ್ದು, ರೇವಣ್ಣ ಯಾನೆ ಅರುಣ್ ಹಾಗೂ ಉಪ್ಪಿನಂಗಡಿಯ ಶ್ರೀ ದೇವಿ ಫೈನಾನ್ಸ್‌ನ ಮೂವರು ಸಿಬ್ಬಂದಿಗಳು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಪೈಕಿ ರೇವಣ್ಣ ಯಾನೆ ಅರುಣ್ ಪೂಂಜಾಲಕಟ್ಟೆ ಪೊಲೀಸ್ ಠಾಣಾ ಸಿಬ್ಬಂದಿ ಎನ್ನಲಾಗಿದೆ.
ನೆಹರುನಗರ ಹೈವೇ ಹೋಟೆಲ್ ಬಳಿಯ ಈಗಲ್ ಕಮ್ಯುನಿಕೇಶನ್ ಮೊಬೈಲ್ ಅಂಗಡಿಗೆ ಮಂಗಳವಾರ ಮಧ್ಯಾಹ್ನದ ವೇಳೆ ಬಂದ ನಾಲ್ವರ ತಂಡವು ನಝೀರ್ ಎಂಬಾತನನ್ನು ವಿಚಾರಿಸಿದ್ದು, ಆತ ಫೈನಾನ್ಸ್‌ನಿಂದ ಬಡ್ಡಿ ರೂಪದಲ್ಲಿ ಪಡೆದುಕೊಂಡ ಹಣ ಪಾವತಿ ಮಾಡುವಂತೆ ನನ್ನನ್ನು ಒತ್ತಾಯಿಸಿದ್ದು, ಈ ಬಗ್ಗೆ ನಮ್ಮ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭ ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಿದ ರೇವಣ್ಣ ಯಾನೆ ಅರುಣ್ ಮತ್ತು ಇತರ ಆರೋಪಿಗಳು ಅಂಗಡಿಯ ಗಾಜನ್ನು ಒಡೆದಿರುತ್ತಾರೆ. ಈ ಸಂದರ್ಭ ಜನ ಬರುತ್ತಿರುವುದನ್ನು ಕಂಡು ನನಗೆ ಜೀವ ಬೆದರಿಕೆ ನೀಡಿದ ಅವರು ಬಂದ ಆಮ್ನಿ ವಾಹನದಲ್ಲಿ ಪರಾರಿಯಾಗಿರುತ್ತಾರೆ ಎಂದು ಫಯಾರ್ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.