×
Ad

ರಾಜ್ಯದ ಬಜೆಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡುವಂತೆ ಆಗ್ರಹಿಸಿ ಎಸ್ ಎಫ್ ಐ ಪ್ರತಿಭಟನೆ

Update: 2016-03-15 21:42 IST

     ಉಳ್ಳಾಲ: ಅಪರಾಧ, ಕೊಲೆ, ಅತ್ಯಾಚಾರ ಮುಂತಾದ ಕೃತ್ಯಗಳಲ್ಲಿ ಶಾಮೀಲಾಗಿ ಜೈಲುವಾಸಿಯಾಗುವ ಅಪರಾಧಿಗಳಿಗೆ ದಿನಕ್ಕೆ ರೂ.80 ಹಣವನ್ನು ಖರ್ಚು ಮಾಡುವ ಸರಕಾರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ದಿನಕ್ಕೆ ಕೇವಲ ರೂ. 12 ಹಣವನ್ನು ಖರ್ಚು ಮಾಡುವ ಮೂಲಕ ಖೈದಿಗಳಿಗಿಂತ ತಳಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಸ್ಥಾನ ನೀಡಲಾಗುತ್ತಿದೆ ಎಂದು ಜಿಲ್ಲಾ ಎಸ್ ಎಫ್ ಐ ಅಧ್ಯಕ್ಷ ನಿತಿನ್ ಕುತ್ತಾರ್ ಖೇದ ವ್ಯಕ್ತಪಡಿಸಿದರು.

   ಅವರು ಎಸ್ ಎಫ್ ಐ ಉಳ್ಳಾಲ ವಲಯದ ಆಶ್ರಯದಲ್ಲಿ ರಾಜ್ಯದ ಬಜೆಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡುವಂತೆ ಆಗ್ರಹಿಸಿ ಉಳ್ಳಾಲದ ಅಬಕ್ಕ ವೃತ್ತದ ಬಳಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

            ಶಿಕ್ಷಣ ಕ್ಷೇತ್ರದಲ್ಲಿಸಮಸ್ಯೆಗಳು ಬೆಳೆದು ಶಿಕ್ಷಣ ನೀತಿಯೇ ಗೊಂದಲದಲ್ಲಿ ಸಿಲುಕಿದೆ. ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳ ಸಂಖೈ ಕಡಿಮೆಯಾಗಿವೆ. ಶಾಲಾ ಸಿಬ್ಬಂದಿಗೆ ಮಾಸಿಕ ವೇತನ ಸರಿಯಾಗಿ ಲಭಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಅಭಿವೃದ್ಧಿ ಶುಲ್ಕವನ್ನು ಪಡೆದುಕೊಂಡು ಸಿಬ್ಬಂದಿಗೆ ವೇತನ ಕೊಡುವ ಪರಿಸ್ತಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಹಿಂಜರಿಯುತ್ತಿದ್ದಾರೆ. ಸರಕಾರಿ ಪದವಿ, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಬೆಳೆಯದ ಕಾರಣ ಖಾಸಗಿ ಮತ್ತು ವಿದೇಶಿ ವಿ.ವಿಗಳಿಗೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಖಾಸಗಿ ಕಂಪೆನಿಗಳಿಗೆ ನೀಡುವ ಸಹಕಾರ ಶಿಕ್ಷಣ ಕ್ಷೇತ್ರಕ್ಕೆ ಸರಕಾರದಿಂದ ಸಿಗುತ್ತಿಲ್ಲ ಎಂದು ಆರೋಪಿಸಿದರು.

         ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವಿದ್ಯಾರ್ಥಿಗಳಿಗೆ ಈವರೆಗೂ ಸಿಗುತ್ತಿದ್ದ ಸ್ಕಾಲರ್‌ಶಿಪ್ ವ್ಯವಸ್ಥೆಯನ್ನು ಆನ್ ಲೈನ್ ಮಾಡುವ ಮೂಲಕ ಜನವರಿ ತಿಂಗಳಲ್ಲಿ ಸಿಗಬೇಕಾದ ಸ್ಕಾಲರ್ ಶಿಪ್ ಮಾಚ್‌ರ್  ತಿಂಗಳಾದರೂ ವಿದ್ಯಾರ್ಥಿಗಳ ಕೈಸೇರಿಲ್ಲ. ರಾಜ್ಯ ಸರಕಾರ ಶೇ.30 ರಷ್ಟು ಶಿಕ್ಷಣಕ್ಕೆ ಅನುದಾನವನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಬಜೆಟ್ ಆಶಾದಾಯಕವಾಗಿರಬೇಕು. ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶ ಇರುವ ಸ್ಕಾಲರ್ ಶಿಪ್ ವ್ಯವಸ್ಥೆಯನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

  ಈ ಸಂದರ್ಭ ಉಳ್ಳಾಲ ವಲಯ ಅಧ್ಯಕ್ಷ ಹಂಝ ಕಿನ್ಯಾ, ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ, ಉಳ್ಳಾಲ ವಲಯ ಕಾರ್ಯದರ್ಶಿ ಅಶ್ವೀದ್ ನಝೀಂ, ಫರಾರ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News