×
Ad

ಮೂಡುಬಿದಿರೆ: ಧವಲಾ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಗಮ

Update: 2016-03-15 23:13 IST

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಕಾಲೇಜಿನ ಹಳೆ ವಿದ್ಯಾರ್ಥಿಗಳ ಕೌಟುಂಬಿಕ ಸಹಮಿಲನ ಸ್ನೇಹಕೂಟ ಹಾಗೂ ಗುರುವಂದನಾ ಕಾರ್ಯಕ್ರಮ ಕಳೆದ ರವಿವಾರ ಸಂಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ರವೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಮಂಗಳೂರು ಕರ್ನಾಟಕ ಬ್ಯಾಂಕಿನ ಮಹಾಪ್ರಬಂಧಕ ಚಂದ್ರಶೇಖರ್ ರಾವ್, ಕ್ಲಾಸಿಕ್ ಫ್ಯೂಶನ್ ಮೆಟಲ್ಸ್‌ನ ಪ್ರಬಂಧಕಿ ನಿರ್ಮಲಾ ವ್ಯಾಟ್ಸನ್, ಕೂಳೂರು ಚರ್ಚ್‌ನ ಸಹಾಯಕ ಧರ್ಮಗುರು ರೆ.ಫಾ. ರಾಕ್ವಿನ್ ಪ್ರಕಾಶ್ ಪಿಂಟೋ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಭವಿಷ್ಯವನ್ನು ರೂಪಿಸಿದ ಸಂಸ್ಥೆಯ ಕುರಿತು ಅಭಿನಂದನಾ ಮಾತುಗಳನ್ನಾಡಿದರು.

ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿರುವ ಅಭಿಜಿತ್ ಎಂ. ಮಾತನಾಡಿ ಧವಲಾ ಕಾಲೇಜು ತನ್ನ ಜೀವನದಲ್ಲಿ ನಿರ್ವಹಣೆಯ ಪಾಠವನ್ನು ಕಲಿಸಿದೆ ಎಂದು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿ ನಿವೃತ್ತರಾದ ಬೋಧಕ, ಬೋಧಕೇತರರನ್ನು ಹಳೆ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಗೌರವಿಸಲಾಯಿತು. ವಿಶ್ರಾಂತ ಪ್ರಾಂಶುಪಾಲ ಪ್ರೊ. ದೇವರಾಜ ಹೆಗ್ಡೆ, ಪ್ರಾಧ್ಯಾಪಕರುಗಳಾದ ಡಾ. ಪುಂಡಿಕಾ ಗಣಪಯ್ಯ ಭಟ್, ಬಿ.ನಂದಿನಿ, ಗೋಪಾಲ್, ಪಿ.ಜೆ. ಜೋಸೆಫ್, ಎಸ್.ಪಿ. ಅಜಿತ್ ಪ್ರಸಾದ್, ಎಂ.ಎನ್ .ಬಡ್ಕಿಲ್ಲಾಯ, ಕಛೇರಿ ಅಧೀಕ್ಷಕರಾಗಿದ್ದ ಸುದೇಶ್ ಕುಮಾರ್, ಸಿಬಂದಿ ನಾರಾಯಣ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಕಾಲೇಜಿನಲ್ಲಿ ಈ ಹಿಂದೆ ಸೇವೆ ಸಲ್ಲಿಸಿರುವರು ಮತ್ತು ಹಾಲಿ ಬೋಧಕರು ಮತ್ತು ಬೋಧಕೇತರರನ್ನು, ದಾನಿಗಳನ್ನು ಗೌರವಿಸಲಾಯಿತು. ಸಮ್ಮಾನಿತರ ಪರವಾಗಿ ಪ್ರೊ. ದೇವರಾಜ ಹೆಗ್ಡೆ ಮಾತನಾಡಿ ಶಿಕ್ಷಕರಿಗೆ ವಿದ್ಯಾರ್ಥಿಗಳೇ ನಿಜವಾದ ಆಸ್ತಿ ಇದ್ದಂತೆ ಎಂದರು. ಹಳೆ ವಿದ್ಯಾರ್ಥಿ ಸಂಘಟನೆಯ ಸಂಯೋಜಕ ಗೋಪಾಲ್ ಸ್ವಾಗತಿಸಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರ್ವಹಿಸಿದರು. ಎಂ.ಗಣೇಶ್ ಕಾಮತ್ ಸಮ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರೂಪೇಶ್ ವಂದಿಸಿದರು. ಜತೆ ಕಾರ್ಯದರ್ಶಿ ಪ್ರಕಾಶ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಮನೋರಂಜನಾ ಕಾರ್ಯಕ್ರಮಗಳು, ಸಹಭೋಜನ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News