ಮಾದಕ ದ್ರವ್ಯ ಸಾಗಣೆ ವಿರುದ್ಧ ಭಾರತದ ನಿರ್ಣಾಯಕ ಕ್ರಮ: ಕಂದಾಯ ಕಾರ್ಯದರ್ಶಿ
ವಿಯನ್ನ, ಮಾ. 15: ಕಪ್ಪು ಹಣವನ್ನು ಬಿಳುಪು ಮಾಡುವುದು ಮತ್ತು ಮಾದಕ ದ್ರವ್ಯ ಸಾಗಣೆಯ ಮೂಲಕ ಅಕ್ರಮ ನಿಧಿ ಸಂಗ್ರಹಣೆ ಮಾಡುವುದರ ವಿರುದ್ಧದ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಲು ಭಾರತ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಅದು ಶೀಘ್ರವೇ ಸಾರ್ಕ್ ದೇಶಗಳ ಪ್ರಾದೇಶಿಕ ಸಹಕಾರ ವೇದಿಕೆಯೊಂದನ್ನು ಸ್ಥಾಪಿಸಲಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅದಿಯ ನಿನ್ನೆ ಇಲ್ಲಿ ಪಿಟಿಐಗೆ ತಿಳಿಸಿದರು.
ಅಂತಾರಾಷ್ಟ್ರೀಯ ಸಂಘಟಿತ ಅಪರಾಧ ಕುರಿತ ದಕ್ಷಿಣ ಏಶ್ಯ ಪ್ರಾದೇಶಿಕ ಗುಪ್ತಚರ ಮತ್ತು ಸಮನ್ವಯ ಕೇಂದ್ರ (ಎಸ್‌ಎಆರ್‌ಐಸಿಸಿ-ಟಿಒಸಿ) ಎಂಬ ಹೆಸರಿನ ಪ್ರಾದೇಶಿಕ ವೇದಿಕೆಯನ್ನು ಸ್ಥಾಪಿಸುವ ಪ್ರಸ್ತಾಪವನ್ನು ಹೊಸದಿಲ್ಲಿಯಲ್ಲಿ ಕಳೆದ ವರ್ಷ ನಡೆದ ಸಾರ್ಕ್ ದೇಶಗಳ ಸಭೆಯೊಂದರಲ್ಲಿ ಮಂಡಿಸಲಾಗಿತ್ತು. ನೆರೆಕರೆಯಲ್ಲಿ ಒಂದಕ್ಕಿಂಕ ಹೆಚ್ಚು ದೇಶಗಳಿಗೆ ಸೇರಿದ ಸಾಮಾನ್ಯ ಸ್ಥಳಗಳಲ್ಲಿ ನಡೆಯುವ ಅಕ್ರಮ ಮಾದಕ ದ್ರವ್ಯಗಳ ವ್ಯಾಪಾರ ಮತ್ತು ಸಾಗಣೆ ಕುರಿತ ಮಹತ್ವದ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ವ್ಯವಸ್ಥೆಯು ಇನ್ನು ಆರು ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.
‘‘ಎಸ್‌ಎಆರ್‌ಐಸಿಸಿ-ಟಿಒಸಿ ಮುಂದಿನ ಆರು ತಿಂಗಳಲ್ಲಿ ಸ್ಥಾಪನೆಗೊಳ್ಳುವುದು. ಅದೊಂದು ಪ್ರಮುಖ ಬೆಳವಣಿಗೆಯಾಗಿರುತ್ತದೆ. ದೇಶಗಳ ಗಡಿಯಿಂದ ಹೊರಗೆ ನಡೆಯುವ ಅಪರಾಧಗಳಲ್ಲಿ ಹಣದ ಹರಿವನ್ನು ತಡೆಯುವಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತದೆ’’ ಎಂದು ಕಂದಾಯ ಕಾರ್ಯದರ್ಶಿ ನುಡಿದರು.
ವಿಶ್ವಸಂಸ್ಥೆಯ ಮಾದಕ ದ್ರವ್ಯ ಆಯೋಗದ ವಿಶೇಷ 59ನೆ ಅಧಿವೇಶನದಲ್ಲಿ ಭಾಗವಹಿಸುವುದಕ್ಕಾಗಿ ಅವರು ಇಲ್ಲಿಗೆ ಬಂದಿದ್ದಾರೆ.