ಚುಟುಕು ಸುದ್ದಿಗಳು
ಇಂದು ಅಭಿನಂದನೆ ಸಭೆ
ಬಂಟ್ವಾಳ, ಮಾ. 15: ಇತ್ತೀಚೆಗೆ ನಡೆದ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿದ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತೆ ಮತ್ತು ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಸ್ಫರ್ಧಿಸಿದ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಹಾಗೂ ಬಂಟ್ವಾಳ ಪುರಸಭೆಯ ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ ಮಾ. 16ರಂದು ಬಿ.ಸಿ.ರೋಡ್ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಕಾವ್ಯ ರಚನಾ ಕಮ್ಮಟಕ್ಕೆ ಆಹ್ವಾನ
ಮಂಗಳೂರು, ಮಾ.15: ಮುಸ್ಲಿಮ್ ಲೇಖಕರ ಸಂಘವು ಉದಯೋನ್ಮುಖ ಕವಿಗಳಿಗೆ ಎ.10ರಂದು ಬಿ.ಸಿ.ರೋಡಿನಲ್ಲಿ ಕಾವ್ಯ ರಚನಾ ಕಮ್ಮಟವನ್ನು ಹಮ್ಮಿಕೊಂಡಿದೆ. ತಜ್ಞ ಸಂಪನ್ಮೂಲವ್ಯಕ್ತಿಗಳು ತರಬೇತಿ ನೀಡಲಿರುವ ಈ ಕಮ್ಮಟದಲ್ಲಿ ಭಾಗವಹಿಸಲಿಚ್ಚಿಸುವವರು ಮಾ.25ರ ಒಳಗಾಗಿ ಹೆಸರು ನೋಂದಾವಣೆಗೆ ಸಂಚಾಲಕರು, ಮುಸ್ಲಿಮ್ ಲೇಖಕರ ಸಂಘ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು -575001 (ದೂ. ಸಂ. 9449104162) ನ್ನು ಸಂಪರ್ಕಿಸಬಹುದು ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಸುರಕ್ಷತಾ ದಿನಾಚರಣೆ
ಉಡುಪಿ, ಮಾ.15: ಹೊಸಂಗಡಿ ವಾರಾಹಿ ಭೂಗರ್ಭ ವಿದ್ಯುದಾಗಾರದಲ್ಲಿ 45ನೆ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಯನಿರ್ವಾಹಕ ನಿರ್ದೇಶಕಿ ಜಿ. ರತ್ನಮ್ಮ, ಸುರಕ್ಷತೆಯನ್ನು ಪಾಲಿಸುವ ಕುರಿತು ನಿಗಮವು ಉದ್ಯೋಗಿ ಗಳಿಗೆ ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದೆ. ಈ ತರಬೇತಿಗಳಲ್ಲಿ ಕಲಿತಿರುವುದನ್ನು ಕಾರ್ಯದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅಪಘಾತಗಳನ್ನು ತಡೆಗಟ್ಟಬಹುದು ಎಂದರು. ಶಿವಮೊಗ್ಗ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆಯ ತರಬೇತುದಾರ ಡಾ. ಕುಮಾರ್ ಎ.ಎಲ್.ಎಸ್. ಉಪನ್ಯಾಸ ನೀಡಿದರು. ಅಧೀಕ್ಷಕ ಅಭಿಯಂತರ ಉದಯ ನಾಯ್ಕಾ, ವೈದ್ಯಕೀಯ ಅಧೀಕ್ಷಕಿ ಡಾ. ವಿಜಯಲಕ್ಷ್ಮೀ ನಾಯಕ್, ಯೋಜನೆ ಸುರಕ್ಷತಾಧಿಕಾರಿ ಉಪೇಂದ್ರ ಪಾಟ್ಕರ್ ಉಪಸ್ಥಿತರಿದ್ದರು. ಸುರಕ್ಷತಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಉದ್ಯೋಗಿಗಳಿಗೆ ಬಹುಮಾನ ವಿತರಿಸಲಾಯಿತು.ಉಷಾರಾಣಿ ಸ್ವಾಗತಿಸಿದರು. ಎ.ಎಲ್.ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ಮಹಾದೇವಪ್ಪಕಾರ್ಯಕ್ರಮ ನಿರೂಪಿಸಿದರು.
‘ಕುಡಿಯುವ ನೀರಿನ ಬಗ್ಗೆ ನಿರ್ಲಕ್ಷ ಸಹಿಸುವುದಿಲ್ಲ’
ಉಡುಪಿ, ಮಾ.15: ಕರಾವಳಿಯಲ್ಲಿ ಬೇಸಿಗೆ ಪ್ರಖರತೆ ಹೆಚ್ಚುತ್ತಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಜನರಿಗೆ ಕುಡಿಯುವ ನೀರಿನ ಬಗ್ಗೆ ನಿರ್ಲಕ್ಷಿಸುವುದನ್ನು ಸಹಿಸುವುದಿಲ್ಲ. ಗ್ರಾಮದಲ್ಲಿ ನೀರಿನ ಮೂಲ ಇಲ್ಲದಿದ್ದರೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ತಕ್ಷಣ ವ್ಯವಸ್ಥೆ ಮಾಡುವಂತೆ ಶಾಸಕ ಪ್ರಮೋದ್ ಮಧ್ವರಾಜ್ ಗ್ರಾಪಂಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಲಭ್ಯತೆಯ ಕುರಿತು ಚರ್ಚಿಸಲು ಗ್ರಾಪಂಗಳ ಪಿಡಿಒ, ವಿಎ, ಇಂಜಿನಿಯರ್‌ಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ವಾರಂಬಳ್ಳಿ, ಕೆಮ್ಮಣ್ಣು ಹಾಗೂ ಬಡಾನಿಡಿಯೂರು ಗ್ರಾಪಂಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಗ್ರಾಪಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ನೀರಿನ ಅಭಾವವಿರುವ ಕಡೆಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಬೇಕು. ಗ್ರಾಪಂಗಳು ನೀರು ಸರಬರಾಜಿಗೆ ಪ್ರಥಮ ಆದ್ಯತೆಯನ್ನು ನೀಡಬೇಕು. ಶಾಸಕರ ಅಧ್ಯಕ್ಷತೆಯಲ್ಲಿರುವ ನೀರು ಕಾರ್ಯಪಡೆಗೆ ಪ್ರಸ್ತಾವನೆ ಸಲ್ಲಿಸಿ ಅದರ ಸೂಚನೆಯಂತೆ ನೀರು ನೀಡಬೇಕು. ಪ್ರಸ್ತಾವನೆ ಸಲ್ಲಿಸುವಾಗ ಹಿಂದಿನ ವರ್ಷಗಳ ಮಾಹಿತಿ, ಈ ಬಾರಿ ಎಷ್ಟು ಬೇಕು, ಯಾವ್ಯಾವ ಗ್ರಾಮದ ಎಲ್ಲೆಲ್ಲಿಗೆ, ಎಷ್ಟು ಮನೆಗಳಿಗೆ ನೀರು ಬೇಕು ಎಂಬ ವಿವರಗಳನ್ನು ಸಲ್ಲಿಸಬೇಕು. ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡುವಾಗ ಶಾಸಕರ ಚಿತ್ರದೊಂದಿಗೆ ಕಾರ್ಯಪಡೆಯ ಬ್ಯಾನರನ್ನು ಕಡ್ಡಾಯವಾಗಿ ಹಾಕಿರಬೇಕು. ಇದರಲ್ಲಿ ಯಾವುದೇ ರಾಜಕೀಯವನ್ನು ಸಹಿಸುವುದಿಲ್ಲ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿ ಹಾಗೂ ಫೈಲ್‌ಗಳನ್ನು 24 ಗಂಟೆಯೊಳಗೆ ವಿಲೇವಾರಿ ಮಾಡಿ ನೀರು ನೀಡಬೇಕು. 24 ಗಂಟೆಯೊಳಗೆ ಕ್ರಮ ತೆಗೆದುಕೊಳ್ಳದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾ ಗುವುದು ಎಂದವರು ಪಿಡಿಒಗಳಿಗೆ ಎಚ್ಚರಿಸಿದರು.ಉಡುಪಿ ವಿಧಾನಸಭಾ ವ್ಯಾಪ್ತಿಯ ಗ್ರಾಪಂಗಳಲ್ಲಿ ಕುಡಿಯುವ ನೀರಿನ ಸ್ಥಿತಿಗತಿ ಕುರಿತು ಅವರು ಮಾಹಿತಿಗಳನ್ನು ಪಡೆದರು. ಇರುವ ನೀರಿನ ಮೂಲಗಳನ್ನು ದುರಸ್ತಿ ಪಡಿಸಲು, ಕಾಮಗಾರಿಗಳನ್ನು ಕೂಡಲೇ ಮುಗಿಸಲು ಎಲ್ಲ ಕಾಮಗಾರಿ ಮುಗಿದ ಯೋಜನೆಗೆ ಮೆಸ್ಕಾಂನಿಂದ ಕೂಡಲೇ ವಿದ್ಯುತ್ ಸಂಪರ್ಕ ಒದಗಿಸಲು ಅವರು ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ತಾಪಂ ಇಒ ಜನಾರ್ದನ್, ಪೌರಾಯುಕ್ತ ಡಿ.ಮಂಜುನಾಥಯ್ಯ ಹಾಗೂ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.
‘ಹಿದಾಯತ್ ಕಾಲನಿ’ಗೆ ‘ಅನುಗ್ರಹ’ ವಿದ್ಯಾರ್ಥಿನಿಯರು ಭೇಟಿ
ಮಂಗಳೂರು, ಮಾ.15: ವಿದ್ಯಾರ್ಥಿನಿಯರಲ್ಲಿ ಸಹಕಾರ ಹಾಗೂ ಸೇವಾ ಮನೋಭಾವನೆ ಮೂಡಿಸುವ ಸಲುವಾಗಿ ಕಲ್ಲಡ್ಕದ ಅನುಗ್ರಹ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯರನ್ನು ಇತ್ತೀಚೆಗೆ ಕಾವಳಕಟ್ಟೆಯಲ್ಲಿರುವ ಹಿದಾಯತ್ ಶೇರ್ ಆ್ಯಂಡ್ ಕೇರ್ ಕಾಲನಿಗೆ ಭೇಟಿ ಮಾಡಿಸಲಾಯಿತು.
ಕಾಲೇಜಿನ ಪದವಿ ಹಾಗೂ ಪದವಿಪೂರ್ವ ವಿಭಾಗದ ಪ್ರಾಂಶುಪಾಲರು, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ವಿದ್ಯಾರ್ಥಿನಿಯರು ಅಲ್ಲಿನ ಮಕ್ಕಳಿಗೆ ಮನೋರಂಜನಾ ಕಾರ್ಯಕ್ರಮ ನೀಡಿದರು. ಸಂಗ್ರಹಿಸಿದ ಸಹಾಯಧನ, ಸಿಹಿತಿಂಡಿಗಳು, ಹಣ್ಣು ಹಂಪಲುಗಳನ್ನು ಮತ್ತು ಬಟ್ಟೆ ಬರೆಗಳನ್ನು ಆಶ್ರಮದ ಮಕ್ಕಳಿಗೆ ವಿತರಿಸಲಾಯಿತು. ಹಿದಾಯತ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಕೆ.ಎಸ್. ಅಬೂಬಕರ್ ಉಪಸ್ಥಿತರಿದ್ದರು. ತಸ್ಲೀಮಾ ಕಿರಾಅತ್ ಪಠಿಸಿದರು. ಫಾತಿಮಾ ಶಫೀಕ್ ಸ್ವಾಗತಿಸಿದರು. ನುಶ್ರತ್ ಫರ್ವೀನ್ ವಂದಿಸಿದರು. ಅನಿಸಾ ಕಾರ್ಯಕ್ರಮ ನಿರೂಪಿಸಿದರು.
ಖಾಝಿ ಸ್ವೀಕಾರ ಸಮಾರಂಭ
ಬಂಟ್ವಾಳ, ಮಾ.15: ಸಜಿಪನಡು ಗ್ರಾಮದ ಕೋಟೆಕಣಿ ತ್ವಾಹ ಜುಮಾ ಮಸೀದಿಯ ಖಾಝಿ ಸ್ವೀಕಾರ ಸಮಾ ರಂಭವು ಮುನವ್ವಿರುಲ್ ಇಸ್ಲಾಂ ಮದ್ರಸದ ವಠಾರದ ಮರ್ಹೂಂ ಅಲ್‌ಹಾಜ್ ಹನೀಫ್ ಉಸ್ತಾದ್ ವೇದಿಕೆಯಲ್ಲಿ ನಡೆಯಿತು. ದ.ಕ.ಜಿಲ್ಲಾ ಖಾಝಿ ಶೈಖುನಾ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರಿ ಖಾಝಿ ಸ್ವೀಕರಿ ಸಿದರು. ಪಾತೂರು ಉಸ್ತಾದ್ ಉದ್ಘಾ ಟಿಸಿದರು. ಯೂಸುಫ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಿದ್ದೀಕ್ ವರಕ್ಕಲ್ ಖಾಝಿ ತ್ವಾಕ ಉಸ್ತಾದರ ಪರಿಚಯ ನೀಡಿದರು. ಅಬೂಬಕರ್ ಸಿದ್ದೀಕ್ ಝೈನಿ ಮುಖ್ಯ ಪ್ರಭಾಷಣ ಮಾಡಿದರು. ವೇದಿಕೆಯಲ್ಲಿ ಹಾಜಿ ಯೂಸುಫ್ ಮುಸ್ಲಿಯಾರ್, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಅಬ್ಬಾಸ್ ಹಾಜಿ ಹಾಗೂ ಆಸಿಫ್ ಕುನ್ನಿಲ್ ಉಪಸ್ಥಿತರಿದ್ದರು. ಟಿ.ಐ.ಅಬ್ದುಲ್ ಬಶೀರ್ ಮುಸ್ಲಿಯಾರ್ ಸ್ವಾಗತಿಸಿದರು. ಸಿದ್ದೀಕ್ ವರಕ್ಕಲ್ ವಂದಿಸಿದರು.
ಎಡರಂಗದ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು
ಕಾಸರಗೋಡು, ಮಾ.15: ಕಾಸರಗೋಡು ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಗೆ ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಅಂತಿಮ ರೂಪು ನೀಡಿದೆ.
ಉದುಮದಿಂದ ಹಾಲಿ ಶಾಸಕ ಕೆ. ಕುಂಞಿರಾಮನ್‌ರಿಗೆ ಎರಡನೆ ಬಾರಿಗೆ ಅವಕಾಶ ನೀಡಲಾಗಿದೆ. ತ್ರಿಕ್ಕರಿಪುರ ಶಾಸಕ ಕೆ. ಕುಂಞಿರಾಮನ್ ಬದಲು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಂ . ರಾಜಗೋಪಾಲ್‌ರನ್ನು ಕಣಕ್ಕಿಳಿಸಲಿದೆ. ಮಂಜೇಶ್ವರದಿಂದ ಮಾಜಿ ಶಾಸಕ ಸಿ.ಎಚ್. ಕುಂಞಂಬುರವರ ಹೆಸರು ಅಂತಿಮ ಪಟ್ಟಿಯಲ್ಲಿದೆ. ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಎಡರಂಗದ ಘಟಕ ಪಕ್ಷವಾದ ಐಎನ್‌ಎಲ್ ಸ್ಪರ್ಧಿಸಿದರೆ, ಕಾಞಂಗಾಡ್ ಕ್ಷೇತ್ರವನ್ನು ಸಿಪಿಐಗೆ ನೀಡಲಾಗಿದೆ. ಕಾಸರಗೋಡು ಕ್ಷೇತ್ರದಲ್ಲಿ ಐಎನ್‌ಎಲ್ ಸ್ಪರ್ಧಿಸಲು ನಿರಾಕರಿಸಿದರೆ ಸಿಪಿಎಂ ಸ್ಪರ್ಧಿಸಲಿದೆ. ಕಾಞಂಗಾಡ್‌ನಿಂದ ಹಾಲಿ ಶಾಸಕ ಸಿಪಿಐ ಪಕ್ಷದ ಇ. ಚಂದ್ರಶೇಖರನ್ ಮತ್ತೆ ಕಣಕ್ಕಿಳಿಯಲಿದ್ದಾರೆ.
ಸರಕಾರಿ ಶಾಲೆಗೆ ವಾಹನ ಹಸ್ತಾಂತರ
ಸುರತ್ಕಲ್, ಮಾ.15: ಮಧ್ಯ ದ.ಕ. ಜಿಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಂಬೈ ವಿ.ಕೆ. ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ, ಶಾಲಾ ಸಮಿತಿಯ ಗೌರವಾಧ್ಯಕ್ಷ ಮದ್ಯಗುತ್ತು ಕರುಣಾಕರ ಎಂ.ಶೆಟ್ಟಿ ಶಾಲಾವಾಹನವನ್ನು ಹಸ್ತಾಂತರಿಸಿದರು. ಈ ಸಂದರ್ಭ ಕಮಲಾದೇವಿ ಪ್ರಸಾದ ಅಸ್ರಣ್ಣ, ಕಸ್ತೂರಿ ಪಂಜ, ವಜ್ರ್ರಾಕ್ಷಿ, ಜಯಾನಂದ, ಈಶ್ವರ ಕಟೀಲು, ವೇ.ಮೂ. ದಾಮೋದರ ತಂತ್ರಿ, ದಾಮೋದರ ಶೆಟ್ಟಿ, ಕೃಷ್ಣ ಮೂರ್ತಿ ಭಟ್, ನವೀನ್ ಕುಮಾರ್, ಶಂಕರ್ ಮದ್ಯ ಬೀಡು, ಮೋಹನ್, ದಿನೇಶ್ ದೇವಾಡಿಗ, ರಾಜೇಶ್, ಪ್ರತಿಮಾ ಶೆಟ್ಟಿ, ಪೀತಾಂಬರ ಕೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮನೋರಮಾ, ಶಾಲಾ ಸ್ಥಳದಾನಿ ವಿಟ್ಠಲ ಶೆಟ್ಟಿ, ಮೋಹನ್ ಟಿ. ಚೌಟ ಉಪಸ್ಥಿತರಿದ್ದರು.