ಮಲ್ಯರ ಔತಣದ ಆಹ್ವಾನವನ್ನು ನಾನೊಮ್ಮೆ ತಿರಸ್ಕರಿಸಿದ್ದೆ: ಪರ್ಸೇಕರ್
ಪಣಜಿ, ಮಾ.15: ದೇಶ ಭ್ರಷ್ಟ ಮದ್ಯದೊರೆ ವಿಜಯ ಮಲ್ಯ ಗೋವಾದಲ್ಲಿ ಅವರ ಹುಟ್ಟು ಹಬ್ಬದ ಔತಣ ಕೂಟವನ್ನೊಮ್ಮೆ ನಡೆಸಿದ್ದಾಗ, ತಾನು ಅವರ ಆಮಂತ್ರಣವನ್ನು ತಿರಸ್ಕರಿಸಿದ್ದೆನೆಂದು ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್ ಹೇಳಿದ್ದಾರೆ.
ಮಲ್ಯ, ಅವರ ಹುಟ್ಟು ಹಬ್ಬಕ್ಕೆ ತನ್ನನ್ನು ಆಹ್ವಾನಿಸಿದ್ದರು. ಅವರು ಕಳುಹಿಸಿದ್ದ ಅಧಿಕಾರಿ ತನಗಾಗಿ ಕೊಠಡಿಯೊಂದನ್ನು ಕಾಯ್ದಿರಿಸಲಾಗಿದೆಯೆಂದು ತಿಳಿಸಿದ್ದನೆಂದು ಪರ್ಸೇಕರ್ ನಿನ್ನೆ ಸಂಜೆ ಪತ್ರಕರ್ತರಿಗೆ ತಿಳಸಿದರು.
ತಾನು ಮನೆಯಲ್ಲೇ ಸುಖವಾಗಿದ್ದೇನೆಂದು ಆತನಿಗೆ ಕೈಮುಗಿದು ತಿಳಸಿದೆನೆಂದು ಅವರು ಹೇಳಿದರು.
ಮಲ್ಯರ ‘ಕಿಂಗ್ ಫಿಶರ್ ಭವನ’ವನ್ನು ಮುಟ್ಟುಗೋಲು ಹಾಕಲು ಬ್ಯಾಂಕ್‌ಗಳಿಗೆ ಅವಕಾಶ ನೀಡಿದ ಕುರಿತು ಪ್ರತಿಕ್ರಿಯಿಸಿದ ಪರ್ಸೇಕರ್, ಕಾನೂನು ತನ್ನದೇ ದಾರಿಯಲ್ಲಿ ಸಾಗುವುದು ಎಂದರು.
ಮಲ್ಯರಿಗೆ ಗೋವಾದಲ್ಲೆಲ್ಲೋ ಆಸ್ತಿಯಿದೆಯೆಂದು ಕೇಳಿದ್ದೇವೆ. ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗಿ ಬಂದರೆ, ಕಾನೂನಿನ ಪ್ರಕಾರವೇ ಎಲ್ಲ ನಡೆಯುತ್ತದೆಂದು ಅವರು ಹೇಳಿದರು.