×
Ad

ಬಾಂಗ್ಲಾದೇಶ ಬ್ಯಾಂಕ್ ದರೋಡೆ: ಗವರ್ನರ್ ರಾಜೀನಾಮೆ

Update: 2016-03-15 23:48 IST

 ಢಾಕಾ(ಬಾಂಗ್ಲಾದೇಶ), ಮಾ. 15: ಸೈಬರ್ ದರೋಡೆಕೋರರು ಬಾಂಗ್ಲಾದೇಶದ ವಿದೇಶಿ ವಿನಿಮಯ ಖಾತೆಯಿಂದ 81 ಮಿಲಿಯನ್ ಡಾಲರ್ (ಸುಮಾರು 545 ಕೋಟಿ ರೂಪಾಯಿ) ಮೊತ್ತವನ್ನು ಎಗರಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್‌ನ ಮುಖ್ಯಸ್ಥರು ಇಂದು ರಾಜೀನಾಮೆ ನೀಡಿದ್ದಾರೆ ಎಂದು ದೇಶದ ಹಣಕಾಸು ಸಚಿವ ಎ.ಎಂ.ಎ. ಮುಹಿತ್ ಹೇಳಿದ್ದಾರೆ.
‘‘ಅವರು ನಿನ್ನೆ ನನಗೆ ಫೋನ್ ಮಾಡಿದರು. ಆಗ ರಾಜೀನಾಮೆ ನೀಡುವಂತೆ ನಾನು ಅವರಿಗೆ ಸೂಚಿಸಿದೆ. ಇಂದು ಅವರು ರಾಜೀನಾಮೆ ನೀಡಿದ್ದಾರೆ’’ ಎಂದು ಸಚಿವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
ಆರ್ಥಿಕ ತಜ್ಞರಾಗಿರುವ ಅತೀವುರ್ ರಹ್ಮಾನ್ 2009ರಲ್ಲಿ ಬಾಂಗ್ಲಾದೇಶ ಬ್ಯಾಂಕ್‌ನ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಆಗಸ್ಟ್‌ನಲ್ಲಿ ನಿವೃತ್ತಿಯಾಗುವುದರಲ್ಲಿದ್ದರು.
ನ್ಯೂಯಾರ್ಕ್‌ನ ಫೆಡರಲ್ ರಿಸರ್ವ್ ಬ್ಯಾಂಕ್‌ನಲ್ಲಿ ಬಾಂಗ್ಲಾದೇಶ ಹೊಂದಿದ್ದ ಖಾತೆಯಿಂದ ಹಣವನ್ನು ದರೋಡೆ ಮಾಡಲಾಗಿತ್ತು. ಈ ಘಟನೆಯು ದೇಶ ಹೊಂದಿರುವ 27 ಬಿಲಿಯ ಡಾಲರ್ (ಸುಮಾರು 1.82 ಲಕ್ಷ ಕೋಟಿ ರೂಪಾಯಿ) ವಿದೇಶಿ ವಿನಿಮಯ ಹಣದ ಭದ್ರತೆ ಬಗ್ಗೆ ಕಳವಳವನ್ನು ಸೃಷ್ಟಿಸಿದೆ.
ಸೈಬರ್ ದರೋಡೆಕೋರರು ಬಹುತೇಕ ಒಂದು ಬಿಲಿಯನ್ ಡಾಲರ್ (ಸುಮಾರು 6,731 ಕೋಟಿ ರೂಪಾಯಿ) ಮೊತ್ತವನ್ನು ದರೋಡೆ ಮಾಡಲು ಯೋಜನೆ ರೂಪಿಸಿದ್ದರು. ಆದರೆ, ಒಂದು ಹಣ ವರ್ಗಾವಣೆಯ ಮನವಿಯಲ್ಲಿನ ಅಕ್ಷರ ದೋಷದಿಂದಾಗಿ ಅಷ್ಟೂ ಹಣ ದರೋಡೆಯಾಗುವುದು ತಪ್ಪಿತ್ತು ಎಂದು ಬಾಂಗ್ಲಾದೇಶ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್ ಕಳೆದ ವಾರ ಹೇಳಿದ್ದರು.

ದರೋಡೆ ಫೆಬ್ರವರಿ 5ರಂದು ನಡೆದಿದ್ದರೂ ಒಂದು ತಿಂಗಳ ಬಳಿಕ ತನ್ನ ಗಮನಕ್ಕೆ ತರಲಾಗಿತ್ತು ಎಂಬುದಾಗಿ ಇತ್ತೀಚೆಗೆ ಸಚಿವರು ಆಕ್ರೋಶ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News