×
Ad

ಮ್ಯಾನ್ಮಾರ್ ಅಧ್ಯಕ್ಷರಾಗಿ ಹಟಿನ್ ಕ್ಯಾವ್ ನೇಪ್ಯಿಡೊ

Update: 2016-03-15 23:51 IST

(ಮ್ಯಾನ್ಮಾರ್), ಮಾ. 15: ಮ್ಯಾನ್ಮಾರ್ ಸಂಸತ್ತು ಮಂಗಳವಾರ ಹಟಿನ್ ಕ್ಯಾವ್‌ರನ್ನು ದೇಶದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಸೇನಾ ಸರಕಾರದ ಹಿಡಿತದಲ್ಲಿದ್ದ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ದೇಶದ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿಯ ನಿಕಟವರ್ತಿಯಾಗಿರುವ ಅವರು ಸೂ ಕಿ ನೇತೃತ್ವದ ಪಕ್ಷದ ಸರಕಾರವನ್ನು ಮುನ್ನಡೆಸಲಿದ್ದಾರೆ.

ಮ್ಯಾನ್ಮಾರ್‌ನ ಸಂವಿಧಾನವು ಸೂ ಕಿ ದೇಶದ ಅಧ್ಯಕ್ಷೆಯಾಗುವುದನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಸೂ ಕಿಯ ಪ್ರತಿನಿಧಿಯಾಗಿ ಅವರು ಆಡಳಿತ ನಡೆಸಲಿದ್ದಾರೆ. 70 ವರ್ಷದ ಹಟಿನ್ ಕ್ಯಾವ್ ಎಪ್ರಿಲ್ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅರ್ಧ ಶತಮಾನಕ್ಕೂ ಅಧಿಕ ಅವಧಿಯ ಸೇನಾಸರಕಾರದ ಬಳಿಕ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮ್ಯಾನ್ಮಾರ್‌ನ ಮೊದಲ ಅಧ್ಯಕ್ಷರು ಅವರಾಗಲಿದ್ದಾರೆ. ಅವರು 652 ಮತಗಳ ಪೈಕಿ 360 ಮತಗಳನ್ನು ಗಳಿಸಿದರು.
ಸೂಕಿಯ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಮೋಘ ವಿಜಯ ಸಂಪಾದಿಸಿತ್ತು. ‘‘ಇದು ಸಹೋದರಿ ಆಂಗ್ ಸಾನ್ ಸೂ ಕಿಯ ವಿಜಯ’’ ಎಂದು ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇತರ ಎರಡು ಅಭ್ಯರ್ಥಿಗಳು ಇನ್ನು ದೇಶದ ಜಂಟಿ ಉಪಾಧ್ಯಕ್ಷರಾಗಲಿದ್ದಾರೆ. 213 ಮತಗಳನ್ನು ಪಡೆದ ಸೇನೆ ಬೆಂಬಲಿತ ಅಭ್ಯರ್ಥಿ ನಿವೃತ್ತ ಜನರಲ್ ಮ್ಯಿಂಟ್ ಸ್ವೆ ಮತ್ತು 79 ಮತಗಳನ್ನು ಗಳಿಸಿದ ಚಿನ್ ಡ ಹೆನ್ರಿ ವಾನ್ ತಿಯೊ ಇತರ ಎರಡು ಅಭ್ಯರ್ಥಿಗಳಾಗಿದ್ದಾರೆ.

ಬರಪೀಡಿತ ಆಗ್ನೇಯ ಏಶ್ಯಕ್ಕೆ ನೀರು: ಚೀನಾ ಬೀಜಿಂಗ್, ಮಾ. 15: ವಿಯೆಟ್ನಾಂ ಸೇರಿದಂತೆ ಆಗ್ನೇಯ ಏಶ್ಯದ ಕೆಲವು ಭಾಗಗಳಲ್ಲಿ ತಲೆದೋರಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಲ್ಲಿಗೆ ನೈರುತ್ಯದ ರಾಜ್ಯ ಯುನಾನ್‌ನಲ್ಲಿನ ಅಣೆಕಟ್ಟೆಯಿಂದ ನೀರು ಬಿಡಲು ಚೀನಾ ನಿರ್ಧರಿಸಿದೆ ಎಂದು ಚೀನಾದ ವಿದೇಶ ಸಚಿವಾಲಯ ಮಂಗಳವಾರ ತಿಳಿಸಿದೆ.
ಜಿಂಗ್‌ಹಾಂಗ್ ಅಣೆಕಟ್ಟೆಯಿಂದ ಎಪ್ರಿಲ್ 10ರವರೆಗೆ ಚೀನಾ ನೀರು ಬಿಡಲಿದೆ ಎಂದು ಸಚಿವಾಲಯದ ವಕ್ತಾರ ಲು ಕಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದರಿಂದ ಕಾಂಬೋಡಿಯ, ಲಾವೋಸ್, ಮ್ಯಾನ್ಮಾರ್, ಥಾಯ್ಲೆಂಡ್ ಮತ್ತು ವಿಯೆಟ್ನಾಂಗಳಿಗೆ ಪ್ರಯೋಜನವಾಗಲಿದೆ.

ಸಿರಿಯದಿಂದ ಯುದ್ಧ ವಿಮಾನಗಳು ವಾಪಸ್: ರಶ್ಯ ಮಾಸ್ಕೊ, ಮಾ. 15: ಸಿರಿಯದಿಂದ ಯುದ್ಧ ವಿಮಾನಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ ಹೊರಡಿಸಿದ ಘೋಷಣೆಗೆ ಅನುಗುಣವಾಗಿ ರಶ್ಯದ ಮೊದಲ ಗುಂಪಿನ ಯುದ್ಧವಿಮಾನಗಳು ಸಿರಿಯದಲ್ಲಿರುವ ರಶ್ಯದ ಹಮೆಯ್‌ಮಿಮ್ ವಾಯು ನೆಲೆಯಿಂದ ಹೊರಟಿವೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.
ಸಿರಿಯದಿಂದ ರಶ್ಯಕ್ಕೆ ಮುಖ ಮಾಡಿದ ವಿಮಾನಗಳಲ್ಲಿ ಸುಖೋಯ್-34 ಯುದ್ಧ ವಿಮಾನಗಳು ಸೇರಿವೆ.
ಸಿರಿಯದಿಂದ ಯುದ್ಧ ವಿಮಾನಗಳನ್ನು ವಾಪಸ್ ಕರೆಸಿಕೊಳ್ಳುವ ಪುಟಿನ್‌ರ ನಿರ್ಧಾರವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸ್ವಾಗತಿಸಿದೆ.
ಆದಾಗ್ಯೂ, ಸಿರಿಯದಲ್ಲಿ ಐಸಿಸ್ ಮತ್ತು ಇತರ ಭಯೋತ್ಪಾದಕ ಗುಂಪುಗಳ ವಿರುದ್ಧದ ವಾಯು ದಾಳಿಯನ್ನು ಮುಂದುವರಿಸುವುದಾಗಿ ರಶ್ಯದ ರಕ್ಷಣಾ ಸಚಿವ ನಿಕೊಲಾಯ್ ಪಂಕೊವ್ ಇಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News