ಮಂಗಳೂರು: ಮನಪಾದಿಂದ ಹಲವೆಡೆ ಅನಧಿಕೃತ ಗೂಡಂಗಡಿಗಳ ತೆರವು
ಮಂಗಳೂರು, ಮಾ.16: ನಗರದ ಹಲವೆಡೆಗಳಲ್ಲಿ ಕಾರ್ಯಾಚರಿಸುತ್ತಿದ್ದ ಅನಧಿಕೃತ ಗೂಡಂಗಡಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ಇಂದು ಮುಂಜಾನೆ ತೆರವುಗೊಳಿಸಿತು.
ಪಾಲಿಕೆ ಆಯುಕ್ತರ ನೇತೃತ್ವದಲ್ಲಿ, ಕಂದಾಯ ಅಧಿಕಾರಿ ಪ್ರವೀಣ್‌ಚಂದ್ರ, ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ, ವಿಜಯ್ ಹಾಗೂ ಸಹಾಯಕ ಅಧಿಕಾರಿಗಳು ಪೊಲೀಸ್ ಹಾಗೂ ಕೆ.ಎಸ್.ಆರ್.ಪಿ. ತುಕಡಿಗಳ ರಕ್ಷಣೆಯಲ್ಲಿ ಈ ತೆರವು ಕಾರ್ಯಾಚರಣೆ ನಡೆಯಿತು. ಸಿಟಿ ಬಸ್ ನಿಲ್ದಾಣ, ರಾವ್ ಆ್ಯಂಡ್ ರಾವ್ ವೃತ್ತದ ಬಳಿ ತೆರವು ಕಾರ್ಯಾಚರಣೆ ನಡೆಸಿದರು.
ಇನ್ನು ಪರವಾನಿಗೆ ನವೀಕರಣಗೊಳ್ಳದ ನಂದಿನಿ ಹಾಲಿನ ಬೂತೊಂದನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾದಾಗ ಬೂತ್‌ನ ಮಾಲಕ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಬೂತ್‌ನ ಹೊರಗಿನ ಕಂಬಗಳನ್ನು ಮಾತ್ರ ಅಧಿಕಾರಿಗಳು ಕಿತ್ತೊಗೆದರು.
ಈ ಬಗ್ಗೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಬೂತ್ ಮಾಲಕ, ''ಪರವಾನಿಗೆ ಹೊಂದಿದ್ದರೂ ನನ್ನ ಅಂಗಡಿಯನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಮಳೆಗಾಲದ ಸಂದರ್ಭ ಮಳೆಹನಿಗಳು ಅಂಗಡಿಯೊಳಗೆ ಸೇರದಂತೆ ಛಾವಣಿ ಹಾಕಿದ್ದು, ಅದರ ಕಂಬಗಳು ಹೊರಗೆ ಇದ್ದುವು. ಅವುಗಳನ್ನು ಜೆ.ಸಿ.ಬಿ. ಬಳಸಿ ತೆರವುಗೊಳಿಸಿದ್ದಾರೆ. ಈ ವೇಳೆ ನೀರಿನ ಟ್ಯಾಂಕ್‌ವೊಂದನ್ನು ಒಡೆದು ಹಾಕಿದ್ದಾರೆ'' ಎಂದು ದೂರಿದರು.
ಮುಂದುವರಿಯಲಿದೆ ಕಾರ್ಯಾಚರಣೆ
ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮ.ನ.ಪಾ. ಆಯುಕ್ತರ ನೇತೃತ್ವದಲ್ಲಿ, ಕಂದಾಯ ಅಧಿಕಾರಿಗಳು ಹಾಗೂ ಆರೋಗ್ಯ ಅಧಿಕಾರಿಗಳು ಪೊಲೀಸರ ಸಹಕಾರದಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಈ ಕಾರ್ಯಾಚರಣೆಯನ್ನು ನಗರಾದ್ಯಂತ ವಿಸ್ತರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.