ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ55 ರನ್‌ಗಳ ಜಯ

Update: 2016-03-16 17:05 GMT

ಕೋಲ್ಕತಾ, ಮಾ.16: ಗರಿಷ್ಠ ಭದ್ರತೆ ನೀಡದಿದ್ದರೆ ಟ್ವೆಂಟಿ-20ವಿಶ್ವಕಪ್‌ನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನ ತಂಡ ತಾನು ಎದುರಿಸಿದ ಮೊದಲ ಪಂದ್ಯದಲ್ಲಿ ಇಂದು ಬಾಂಗ್ಲಾದೇಶ ತಂಡದ ವಿರುದ್ಧ 55 ರನ್‌ಗಳ ಜಯ ಗಳಿಸಿದೆ.

 ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗೆಲುವಿನ ಅಭಿಯಾನ ಆರಂಭಿಸಿದ ಪಾಕಿಸ್ತಾನ ತಂಡ ಏಷ್ಯಾ ಕಪ್‌ನಲ್ಲಿ ಆಗಿರುವ ಸೋಲಿಗೆ ಬಾಂಗ್ಲಾ ವಿರುದ್ಧ ಸೇಡು ತೀರಿಸಿಕೊಂಡಿದೆ.

ಗೆಲುವಿಗೆ 202 ರನ್‌ಗಳ ಸವಾಲನ್ನು ಪಡೆದ ಬಾಂಗ್ಲಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 146 ರನ್ ಗಳಿಸಿತು.

ಬಾಂಗ್ಲಾ ತಂಡದ ಆರಂಭ ಚೆನ್ನಾಗಿರಲಿಲ್ಲ. ಮೊದಲ ಓವರ್‌ನ ಮೂರನೆ ಎಸೆತದಲ್ಲಿ ಆರಂಭಿಕ ದಾಂಡಿಗ ಸೌಮ್ಯ ಸರ್ಕಾರ್ ಅವರು ಮುಹಮ್ಮದ್ ಆಮಿರ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಸರ್ಕಾರ್ (0) ಖಾತೆ ತೆರೆಯದೆ ನಿರ್ಗಮಿಸಿದ್ದು ಬಾಂಗ್ಲಾದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು.

ಶಾಕಿಬ್ ಅರ್ಧಶತಕ: ತಮೀಮ್ ಇಕ್ಬಾಲ್ ಮತ್ತು ಶಬ್ಬಿರ್ ರಹ್ಮಾನ್ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿ ಸ್ಕೋರ್‌ನ್ನು 5.5 ಓವರ್‌ಗಳಲ್ಲಿ 44ಕ್ಕೆ ಏರಿಸಿದರು. ಶಾಹಿದ್ ಅಫ್ರಿದಿ ಅವರು ಶಬ್ಬೀರ್ ರಹ್ಮಾನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.

ಶಬ್ಬೀರ್ ರಹ್ಮಾನ್ 19 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 25 ರನ್ ಗಳಿಸಿದರು. ತಮೀಮ್ ಇಕ್ಬಾಲ್ 8ನೆ ಓವರ್‌ನ ಮುಕ್ತಾಯಕ್ಕೆ ಶಾಹಿದ್ ಅಫ್ರಿದಿ ಎಸೆತದಲ್ಲಿ ಇಮಾದ್ ವಸೀಮ್‌ಗೆ ಕ್ಯಾಚ್ ನೀಡಿದರು.

 ಮಹ್ಮೂದುಲ್ಲಾ 4 ರನ್ ಗಳಿಸಿದರು. ವಿಕೆಟ್ ಕೀಪರ್ ಮುಶ್ಫಿಕುರ್ರಹೀಮ್ 18 ರನ್, ಮುಹಮ್ಮದ್ ಮಿಥುನ್ 2 ರನ್ ಗಳಿಸಿದರು. ಕೊನೆಯಲ್ಲಿ ನಾಯಕ ಮಶ್ರಾಫೆ ಮುರ್ತಝ ಮತ್ತು ಮಾಜಿ ನಾಯಕ ಶಾಕಿಬ್ ಅಲ್ ಹಸನ್ ಮುರಿಯದ ಜೊತೆಯಾಟದಲ್ಲಿ 29 ರನ್‌ಗಳ ಜೊತೆಯಾಟ ನೀಡಿದರು. ಮುರ್ತಝ 9 ಎಸೆತಗಳನ್ನು ಎದುರಿಸಿ 2 ಬೌಂಡರಿ ಮತ್ತು ಒಂದು ಸಿಕ್ಸರ್ ಇರುವ 15 ರನ್ ಕಾಣಿಕೆ ನೀಡಿದರು.

ಶಾಕಿಬ್ ಅಲ್ ಹಸನ್ ಔಟಾಗದೆ ಅರ್ಧಶತಕ ದಾಖಲಿಸಿದರು. ಅವರು 40 ಎಸೆತಗಳನ್ನು ಎದುರಿಸಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಲ್ಲಿ 50 ರನ್ ಗಳಿಸಿದರು. ಪಾಕಿಸ್ತಾನ ತಂಡದ ಮುಹಮ್ಮದ್ ಆಮಿರ್ (27ಕ್ಕೆ 2) ಮತ್ತು ಶಾಹಿದ್ ಅಫ್ರಿದ್(27ಕ್ಕೆ 2) ತಲಾ ಎರಡು ವಿಕೆಟ್ ಹಂಚಿಕೊಂಡರು. ಮುಹಮ್ಮದ್ ಇರ್ಫಾನ್(1-30) ಮತ್ತು ಇಮಾದ್ ವಸೀಮ್ (1-13) ತಲಾ 1 ವಿಕೆಟ್ ಹಂಚಿಕೊಂಡರು.

< ಪಾಕಿಸ್ತಾನ 201/5: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 201 ರನ್ ಗಳಿಸಿತ್ತು.

ಪಾಕಿಸ್ತಾನದ ಆರಂಭಿಕ ದಾಂಡಿಗ ಅಹ್ಮದ್ ಶೆಹಝಾದ್ ಮತ್ತು ಮುಹಮ್ಮದ್ ಹಫೀಝ್ ಎರಡನೆ ವಿಕೆಟ್‌ಗೆ 95 ರನ್ ದಾಖಲಿಸಿ ಬಾಂಗ್ಲಾಕ್ಕೆ ಕಠಿಣ ಸವಾಲು ವಿಧಿಸಲು ನೆರವಾದರು.

ಮುಹಮ್ಮದ್ ಹಫೀಝ್ ಈಡನ್ ಗಾರ್ಡನ್ಸ್‌ನಲ್ಲಿ ಎರಡು ದಿನಗಳ ಹಿಂದೆ 49 ಎಸೆತಗಳಲ್ಲಿ 70 ರನ್ ಗಳಿಸಿದ್ದರು. ಅದೇ ಪ್ರದರ್ಶನ ಮುಂದುವರಿಸಿದ ಹಫೀಝ್ 64 ರನ್(42ಎ, 7ಬೌ,2ಸಿ) ಗಳಿಸಿದರು. ಇವರಿಗೆ ಸಾಥ್ ನೀಡಿದ್ದ ಅಹ್ಮದ್ ಶೆಹಝಾದ್ 52 ರನ್(39ಎ, 8ಬೌ) ಗಳಿಸಿದರು. ನಾಯಕ ಶಾಹಿದ್ ಅಫ್ರಿದಿ ಆಲ್‌ರೌಂಡ್ ಪ್ರದರ್ಶನ ನೀಡಿದರು. ಅಫ್ರಿಧಿ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು. ಆದರೆ ಅವರನ್ನು ಅರ್ಧಶತಕ ದಾಖಲಿಸಲು ತಸ್ಕಿನ್ ಅಹ್ಮದ್ ಬಿಡಲಿಲ್ಲ.

  ಪಾಕಿಸ್ತಾನ ತಂಡದ ಆರಂಭಿಕ ದಾಂಡಿಗ ಶಾರ್ಜಿಲ್ ಖಾನ್ (18) ಮತ್ತು ಶುಐಬ್ ಮಲಿಕ್ (ಔಟಾಗದೆ 15) ಎರಡಂಕೆಯ ಸ್ಕೋರ್ ದಾಖಲಿಸಿದರು.

ತಸ್ಕಿನ್ ಅಹ್ಮದ್ 32ಕ್ಕೆ 2, ಅರಾಫತ್ ಸನ್ನಿ 34ಕ್ಕೆ 2 ವಿಕೆಟ್ , ಶಬ್ಬೀರ್ ರಹ್ಮಾನ್ 11ಕ್ಕೆ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News