ಆಸಾರಾಂ ಬಾಪು ಲೈಂಗಿಕ ಕಿರುಕುಳ ಪ್ರಕರಣದ ಸಾಕ್ಷಿಗಳ ಇತಿಶ್ರೀಗಾಗಿ ಅನುಯಾಯಿಗಳಿಂದ ಸುಪಾರಿ!

Update: 2016-03-16 11:41 GMT

ಹೊಸದಿಲ್ಲಿ, ಮಾರ್ಚ್.16: ಬಹುವಿವಾದಿತ ದೇವಮಾನವ ಆಸಾರಾಂ ಬಾಪು ವಿರುದ್ಧ ಪ್ರಕರಣದ ಸಾಕ್ಷಿಗಳ ಹತ್ಯೆಗೈಯಲಿಕ್ಕಾಗಿ ವೃತ್ತಿಪರ ಗೂಂಡಾಗಳನ್ನು ನೇಮಿಸಲಾಗಿತ್ತು. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲು ಪಾಲಾದ ಆಸಾರಾಂ ಬಾಪುವನ್ನು ರಕ್ಷಿಸಲಿಕ್ಕಾಗಿ ಅವರ ಅನುಯಾಯಿಗಳು ಬಾಡಿಗೆ ಕೊಲೆಗಡುಕರನ್ನು ನೇಮಿಸಿದ್ದೆಂಬ ಸಮಾಚಾರ ಇದೀಗ ಬೆಳಕಿಗೆ ಬಂದಿದೆ. 25 ಲಕ್ಷ ರೂ. ನೀಡಿ ಕಾರ್ತಿಕ್ ಹಲ್ದಾರ್ ಎಂಬ ಶಾರ್ಪ್ ಶೂಟರ್‌ನನ್ನು ಸಾಕ್ಷಿಗಳ ಹತ್ಯೆಗಾಗಿ ಇವರು ನೇಮಿಸಿದ್ದರು. ಏಳು ಸಾಕ್ಷಿಗಳಲ್ಲಿ ಮೂವರನ್ನು ಈತ ಈಗಾಗಲೇ ಕೊಂದು ಮುಗಿಸಿದ್ದಾನೆ. ಆದರೆ ಉಳಿದ ನಾಲ್ವರ ಹತ್ಯೆಗೆ ಪ್ರಯತ್ನಿಸಿದರೂ ಆತ ಯಶಸ್ವಿಯಾಗಲಿಲ್ಲ. ಕಳೆದ ದಿವಸ ಈತನನ್ನು ಭಯೋತ್ಪಾದನಾ ವಿರೋಧಿ ಸ್ಕ್ವಾಡ್ ಬಂದಿಸಿತ್ತು. ವಿಚಾರಣೆ ವೇಳೆ ಈ ಮಾಹಿತಿಯನ್ನು ನೀಡಿದ್ದಾನೆ.

ಪ್ರವೀಣ್ ವಕೀಲ್, ಕೆ.ಡಿ. ಪಟೇಲ್, ಸಂಜಯ್ ಜೋದ್‌ಪುರ್, ಮೋಹನ್ ಕಿಶೋರ್ ಎಂ ಆಸಾರಾಂ ಬಾಪು ಅನುಯಾಯಿಗಳು ತನ್ನನ್ನು ಭೇಟಿಯಾಗಿ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಕಾರ್ತಿಕ್ ಹೇಳಿದ್ದಾನೆ. ಇವರ ಬಂಧನ ಶ್ರೀಘ್ರವೇ ನಡೆಯಲಿದೆ. ಆಸಾರಾಂ ಬಾಪು ಮತ್ತು ಮಗ ನಾರಾಯಣ ಸಾಯಿ ವಿವಿಧ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ರಾಜಸ್ತಾನ ಮತ್ತು ಗುಜರಾತ್  ಜೈಲಿನೊಳಗಿದ್ದಾರೆ. ರಾಜಸ್ಥಾನದ ಜೋಧ್‌ಪುರ, ಗುಜರಾತ್‌ನ ಸೂರತ್, ಅಹ್ಮದಾಬಾದ್‌ಗಳಲ್ಲಿ ಆಸಾರಾಂ ಮತ್ತು ಪುತ್ರ ನಾರಾಯಣ ಸಾಯಿ ವಿರುದ್ಧ ಪ್ರಕರಣ ದಾಖಲಾಗಿದೆ.

2014 ಜೂನ್‌ನಲ್ಲಿ ಆಸಾರಾಂ ಸಹಾಯಕ ಮತ್ತು ಪ್ರಧಾನ ಸಾಕ್ಷಿಯಲ್ಲೋರ್ವನಾದ ಅಮೃತ್ ಪ್ರಜಾಪತಿಯನ್ನು ರಾಜ್‌ಕೋಟ್‌ನಲ್ಲಿ ಗುಂಡಿಟ್ಟು ಕೊಂದಿದ್ದೇನೆ. ಇನ್ನೊಬ್ಬ ಸಾಕ್ಷಿಕೃಪಾಲ್ ಸಿಂಗ್‌ರನ್ನು ಉತ್ತರಪ್ರದೇಶದ ಶಹಜಾನ್‌ಪುರದಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಕೊಂದಿದ್ದೇನೆ ಎಂದು ಆತ ಹೇಳಿದ್ದಾನೆ. ಆಸಾರಾಂರ ಅಡುಗೆಯಾಳು ಅಖಿಲ್ ಗುಪ್ತ ಎಂಬ ಸಾಕ್ಷಿ 2015 ಜನವರಿಯಲ್ಲಿ ಉತ್ತರ ಪ್ರದೇಶದ ಮುಝಫ್ಫರ್ ನಗರ್‌ನಲ್ಲಿ ಹತ್ಯೆಯಾಗಿದ್ದರು. ಇವರು ಆಸಾರಾಂ ವಿರುದ್ಧ ಸಾಕ್ಷಿ ಹೇಳಿದ್ದರು. ಅಖಿಲ್ ಗುಪ್ತರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ನಾಡ ಬಂದೂಕು ಸಹಿತ ಹತ್ತರಷ್ಟು ಕೋವಿಯನ್ನು ಕೊಲೆ ಪಾತಕಗಳಿಗಾಗಿ ಬಳಸಲಾಗಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News