ಪುತ್ತೂರು : ಮನೆಯಲ್ಲಿ ಬೆಂಕಿ ಆಕಸ್ಮಿಕ-ಅಪಾರ ನಷ್ಟ
ಪುತ್ತೂರು : ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಿಂದಾಗಿ ವಸ್ತುಗಳು ಭಸ್ಮಗೊಂಡು ಅಪಾರ ಹಾನಿಯಾದ ಘಟನೆ ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ಬೊಳಿಕಲ ಎಂಬಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಕೆಯ್ಯೂರು ಗ್ರಾಮದ ಬೊಳಿಕಲ ಸುಳ್ಯ ನಿವಾಸಿ ನಾರಾಯಣ ಪೂಜಾರಿ ಅವರ ಪತ್ನಿ ಹೇಮಾವತಿ ಎಂಬವರಿಗೆ ಸೇರಿದ ಸೌಭಾಗ್ಯ ನಿವಾಸ ಮನೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಟಿವಿ ಸ್ವಿಚ್ ಬೋರ್ಡಿನಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್‌ಸಕ್ಯೂಟ್‌ನಿಂದಾಗಿ ಕೆಳಗಡೆಯಿದ್ದ ಸೋಫಾಕ್ಕೆ ತಗುಲಿದ ಬೆಂಕಿಯ ಕಿಡಿಯಿಂದಾಗಿ ಈ ದುರಂತ ಸಂಭವಿಸಿರುವುದಾಗಿ ತಿಳಿದು ಬಂದಿದೆ.
ತಾರಸಿ ಮನೆಯಲ್ಲಿ ಸಂಭವಿಸಿದ ಈ ಬೆಂಕಿ ಆಕಸ್ಮಿಕದಿಂದಾಗಿ ಟಿವಿ, ಟಿವಿ ಟೇಬಲ್, ಸೋಫಾ, ಮರದ ಕುರ್ಚಿಗಳು ,ಚಾರ್ಜರ್ ಲೈಟ್ ವಿದ್ಯುತ್ ಉಪಕರಣಗಳು ಮತ್ತು ವಿದ್ಯುತ್ ವಯರಿಂಗ್ ಸಂಪರ್ಕ ವ್ಯವಸ್ಥೆ ಸುಟ್ಟು ಭಸ್ಮಗೊಂಡಿದ್ದು, ಅಪಾರ ನಷ್ಟ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಮನೆಯ ಗೋಡೆಗೆ ಮತ್ತು ತಾರಸಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಬೆಂಕಿ ಆಕಸ್ಮಿಕ ಸಂಭವಿಸಿದ ಮನೆಗೆ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಕಾಂಗ್ರೆಸ್ ಮುಖಂಡರು ಬುಧವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.