ಬಿಎಸ್‌ಎನ್‌ಎಲ್- ಗ್ರಾಮ ಪಂಚಾಯತ್ ನಡುವಿನ ವಿವಾದ ;ಗ್ರಾಹಕರ ದೂರವಾಣಿ ಸಂಪರ್ಕ ಸ್ಥಗಿತ
ಮಂಗಳೂರು.ಮಾ.16:ಬಿಎಸ್‌ಎನ್‌ಎಲ್ ಹಾಗೂ ಗ್ರಾಮ ಪಂಚಾಯತ್ ನಡುವಿನ ಸಮಸ್ಯೆಯಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನೆಕ್ಕಿಲಾಡಿ -34ನೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.ಪ್ರಸಕ್ತ ಇಲ್ಲಿನ ಗ್ರಾಮಸ್ಥರು ಕಳೆದ ಒಂದುವಾರದಿಂದ ಬಿಎಸ್‌ಎನ್‌ಎಲ್ ದೂರವಾಣಿ ಸಂಪರ್ಕದಿಂದ ವಂಚಿತರಾಗಿರುವ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಳೆದ ಒಂದು ವಾರದ ಹಿಂದೆ ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕಾಗಿ ನೀರಿನ ಪೈಪ್ ಅಳವಡಿಸಲು ಕಾಮಗಾರಿ ಆರಂಭಗೊಂಡಿತ್ತು.ಈ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ಮೂಲಕ ದೂರವಾಣಿ ಸಂಪರ್ಕಕ್ಕಾಗಿ ನೆಲದ ಅಡಿಯಲ್ಲಿ ಅಳವಡಿಸಿರುವ ಕೇಬಲ್‌ಗಳು ತುಂಡಾಗಿದೆ.ಇದರಿಂದಾಗಿ ನೆಕ್ಕಿಲಾಡಿಯ ಗ್ರಾಮದ ಹಲವಾರು ಗ್ರಾಮಸ್ಥರ ಸ್ಥಿರ ದೂರವಾಣಿಗಳು ನಿಷ್ಕ್ರೀಯಗೊಂಡಿತ್ತು .ಈ ಬಗ್ಗೆ ಬಿಎಸ್‌ಎನ್‌ಎಲ್ ಗ್ರಾಹಕ ಸೇವಾ ವಿಭಾಗಕಕ್ಕೆ ಗ್ರಾಹಕರು ದೂರು ನೀಡಿ ಒಂದು ವಾರ ಕಳೆದರೂ ಸಮಸ್ಯೆ ಪರಿಹಾರವಾಗಿಲ್ಲ.ನಿಷ್ಕ್ರೀಯ ಗೊಂಡ ಸ್ಥಿರ ದೂರವಾಣಿ ಸಂಪರ್ಕಗಳು ಇನ್ನೂ ಸುಸ್ಥಿತಿಗೆ ಮರಳಿಲ್ಲ ಎಂದು ಗ್ರಾಹಕರು ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ನೆಕ್ಕಿಲಾಡಿ ಗ್ರಾಮ ಪಂಚಾಯತ್‌ನಿಂದ ಬಿಎಸ್‌ಎನ್‌ಎಲ್ ವಿರುದ್ಧ ಆರೋಪ:-ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಸ್ಕರ್ ಅಲಿ ಅವರ ಹೇಳಿಕೆಯ ಪ್ರಕಾರ,ನೆಕ್ಕಿಲಾಡಿ ಗ್ರಾಮ ಪಂಚಾಯತ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ತ್ವರಿತವಾಗಿ ಕಾಮಗಾರಿ ಕೈ ಗೊಳ್ಳಲು ನಿರ್ಧರಿಸಲಾಗಿತ್ತು.ಈ ಸಂದರ್ಭದಲ್ಲಿ ಟೆಲಿಕಾಂ ಇಲಾಖೆಯವರಿಗೆ ಸೂಚನೆ ನೀಡಲಾಗಿತ್ತು.ಅವರ ಬಳಿ ಕೇಬಲ್ ಅಳವಡಿಸಿದ ಪ್ರದೇಶದ ನಕ್ಷೆಯನ್ನು ಕೋರಲಾಗಿತ್ತು.ಆದರೆ ಬಿಎಸ್‌ಎನ್‌ಎಲ್‌ನ ಅಧಿಕಾರಿಗಳು ಗ್ರಾಮ ಪಂಚಾಯತ್‌ನ ಸೂಚನೆಯನ್ನು ಸರಿಯಾಗಿ ಪಾಲಿಸಿಲ್ಲ,ಮಾಹಿತಿಯನ್ನು ನೀಡಿಲ್ಲ ಇದರಿಂದಾಗಿ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ.
ಭೂಮಿಯಲ್ಲಿ ಅಂತರ್ಗತ ಕೇಬಲ್ ಅಳವಡಿಸುವ ಸಂದರ್ಭದಲ್ಲಿ 5ಅಡಿ ಕೆಳಗೆ ಹೊಂಡತೋಡಿ ಅಳವಡಿಸಬೇಕು.ಕೇಬಲ್ ಎಲ್ಲಿ ಅಳವಡಿಸಲಾಗಿದೆ ಆ ಪ್ರದೇಶದಲ್ಲಿ ಸೂಚನಾ ಫಲಕ ಅಳವಡಿಸಬೇಕು ಮತ್ತು ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಕೇಬಲ್ ಅಳವಡಿಸಿದ ಪ್ರದೇಶಗಳ ನಕ್ಷೆಯನ್ನು ಗ್ರಾಮ ಪಂಚಾಯತ್‌ಗೆ ನೀಡಬೇಕಾಗಿತ್ತು.ಆದರೆ ಈ ಯಾವ ನಿಯಮವನ್ನು ಬಿಎಸ್‌ಎನ್‌ಎಲ್‌ನ ಅಧಿಕಾರಿಗಳು ಪಾಲಿಸಿಲ್ಲ.ಕೇವಲ 2 ಅಡಿ ಆಳದ ಗುಂಡಿ ತೋಡಿ ಕೇಬಲ್ ಅಳವಡಿಸಿದ್ದಾರೆ.ಕೆಲವು ಕಡೆ ಈ ಕೇಬಲ್ ಮೇಲಕ್ಕೆ ಎದ್ದು ಕಾಣುತ್ತಿವೆ. ಆ ಕಾರಣದಿಂದ ಕುಡಿಯುವ ನೀರಿನ ಪೈಪ್ ಅಳವಡಿಸುವ ಸಂದರ್ಭದಲ್ಲಿ ಕೆಲವು ಕಡೆ ಕೇಬಲ್‌ಗಳಿಗೆ ಹಾನಿಯಾಗಿರುವ ಕಾರಣದಿಂದ ಗ್ರಾಹಕರಿಗೆ ತೊಂದರೆಯಾಗಿರುವ ಸಾಧ್ಯತೆ ಇದೆ.ಈ ಬಗ್ಗೆ ಬಿಎಸ್‌ಎನ್‌ಎಲ್ ಗಮನಹರಿಸಬೇಕಾಗಿದೆ .ಸಮಸ್ಯೆ ಪರಿಹಾರ ಮಾಡುವ ಬದಲು ಈ ಬಗ್ಗೆ ಬಿಎಸ್‌ಎನ್‌ಎಲ್‌ನ ಅಧಿಕಾರಿಗಳು ಗ್ರಾಮ ಪಂಚಾಯತ್‌ಗೆ 2ಲಕ್ಷ ರೂ ಪರಿಹಾರ ನೀಡಬೇಕೆಂದು ನೊಟೀಸು ಜಾರಿ ಮಾಡಿದ್ದಾರೆ ಎಂದು ಅಸ್ಕರ್ ಅಲಿ ತಿಳಿಸಿದ್ದಾರೆ.
‘‘ನಾನು ಬಿಎಸ್‌ಎನ್‌ಎಲ್ ಬಳಕೆದಾರ.ಕಳೆದ ಹತ್ತು ದಿನಗಳಿಂದ ನನ್ನ ಉದ್ಯಮದ ದೂರವಾಣಿ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.ಈ ಬಗ್ಗೆ ದೂರವಾಣಿ ಇಲಾಖೆಗೆ ದೂರು ನೀಡಿದಾಗ ದೂರು ದಾಖಲಾಗಿದೆ.ಸರಿಪಡಿಸುವ ಬಗ್ಗೆಯೂ ಭರವಸೆ ನೀಡಲಾಗಿತ್ತು ಆದರೆ ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ.ಇದರಿಂದ ನನ್ನ ಉದ್ಯಮಕ್ಕೂ ಸಮಸ್ಯೆಯಾಗಿದೆ ’’ಎಂದು ನೆಕ್ಕಿಲಾಡಿಯ ದೂರವಾಣಿ ಬಳಕೆದಾರ ಕೆ.ಪಿ.ಸತ್ಯಂ ಪತ್ರಿಕೆ ತಿಳಿಸಿದ್ದಾರೆ.