×
Ad

ಪುತ್ತೂರು ಶ್ರಿ ಮಹಾಲಿಂಗೇಶ್ವರ ದೇವಳದ ಬಳಿ ಭಕ್ತರ ಸಭೆ

Update: 2016-03-16 19:49 IST

ಪುತ್ತೂರು: ಪುತ್ತೂರು ಶ್ರಿ ಮಹಾಲಿಂಗೇಶ್ವರ ದೇವಳದ ಜಾತ್ರಾ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂಯೇತರ ಆಧಿಕಾರಿಯಾಗಿರುವ ದ.ಕ.ಜಿಲ್ಲಾಧಿಕಾರಿಗಳ ಹೆಸರನ್ನು ಮುದ್ರಿಸಿರುವ ಬಗ್ಗೆ ತೀರ್ಮಾನ ಕೈಗೊಳ್ಳಲು ಬುಧವಾರ ಸಂಜೆ ದೇವಳದ ಭಕ್ತರ ಸಭೆಯು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯ ಬಳಿ ನಡೆಯಿತು. ಸಭೆಯಲ್ಲಿ ಆಮಂತ್ರಣ ಮರು ಮುದ್ರಣಕ್ಕೆ ಆಗ್ರಹಿಸಿ ಗುರುವಾರ ಬೆಳಿಗ್ಗೆ ಪುತ್ತೂರು ಮಿನಿವಿಧಾನ ಸೌಧದ ಮುಂಬಾಗದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ದೇವಳದ ಆಮಂತ್ರಣದಲ್ಲಿ ಹಿಂದೂಯೇತರರ ಹೆಸರು ಹಾಕಿರುವುದು ಸರಿಯಲ್ಲ. ಈ ಬಗ್ಗೆ ಗುರುವಾರ ಬೆಳಗ್ಗೆ 10ಕ್ಕೆ ಪುತ್ತೂರು ಮಿನಿವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ದೇವಳದ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂಯೇತರರ ಹೆಸರು ಹಾಕುವ ಸಂಪ್ರದಾಯವನ್ನು ಮುಂದುವರಿಯಲು ಬಿಡಬಾರದು. ಗುರುವಾರ ಬೆಳಗ್ಗೆ 9.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಿಂದ ಮೆರವಣಿಗೆ ಹೊರಡಲಿದೆ. ಪುತ್ತೂರು ಮಿನಿವಿಧಾನಸೌಧ ಮುಂಭಾಗಕ್ಕೆ ತಲುಪಿ 10 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೆ ಸ್ಪಂಧನೆ ಸಿಗದಿದ್ದಲ್ಲಿ ಶನಿವಾರ ರಾಸ್ತಾರೋಕೋ ನಡೆಸಲಾಗುವುದು. ಅದಕ್ಕೂ ಜಿಲ್ಲಾಡಳಿತ ಸ್ಪಂಧಿಸದಿದ್ದಲ್ಲಿ ಬಳಿಕ ಬಂದ್‌ಗೆ ಕರೆ ನೀಡಲಾಗುವುದು ಎಂದು ತಿಳಿಸಿದರು. ಘಟನೆ ಬಗ್ಗೆ ವಿವರಣೆ ನೀಡಿದ ನಗರಸಭೆ ಸದಸ್ಯ ರಾಜೇಶ್ ಬನ್ನೂರು, ದೇವಳದ ಗಂಧ ಸ್ವೀಕರಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೇಳುವಂತೆ ಆಮಂತ್ರಣ ಮುದ್ರಿಸಿರುವುದನ್ನು ಪ್ರಶ್ನಿಸಿದ್ದೆವು. ಇದಕ್ಕೆ ಜಿಲ್ಲಾಧಿಕಾರಿ ಉದ್ಧಟತನದ ಸಮರ್ಥನೆ ನೀಡಿದ್ದಾರೆ. ಎಂಡೋಮೆಂಟ್ ಕಾನೂನಿನಂತೆ ಅನ್ಯಮತೀಯರು ಮತ್ತು ದೇವರ ಮೇಲೆ ನಂಬಿಕೆ ಇರದವರು ದೇವಳದ ಜವಾಬ್ದಾರಿ ವಹಿಸಿಕೊಳ್ಳುವಂತಿಲ್ಲ. ಇದರ ಮೇಲೂ ಜಿಲ್ಲಾಧಿಕಾರಿ ಹೇಳಿಕೆ ನೀಡಿ ಹೆಸರು ಮುದ್ರಣವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಆಮಂತ್ರಣ ಪತ್ರಿಕೆಯನ್ನು ಮರುಮುದ್ರಿಸ ಬೇಕು ಎಂದು ಆಗ್ರಹಿಸಿದ ಅವರು ಪ್ರತಿವರ್ಷ ಜಾತ್ರಾ ಸಮಯದಲ್ಲಿ ಭಕ್ತಾದಿಗಳ ಸಭೆ ಕರೆಯಲಾಗುತ್ತಿತ್ತು. ಆದರೆ ಈ ಬಾರಿ ಅಧಿಕಾರಿಗಳು ಯಾವುದೇ ಭಕ್ತರನ್ನು ಕರೆಯದೇ ತಮ್ಮಿಷ್ಟದಂತೆ ಸಭೆ ನಡೆಸಿದ್ದಾರೆ. ಆಮಂತ್ರಣ ಮರು ಮುದ್ರಿಸದೇ ಅನಾಹುತವಾದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದರು.
ಬಜರಂಗದಳದ ಮುರಳೀಕೃಷ್ಣ ಹಸಂತ್ತಡ್ಕ ಮಾತನಾಡಿ, ಇದು ಜಿಲ್ಲಾಧಿಕಾರಿ ಅಥವಾ ಅಧಿಕಾರಿಗಳ ವಿರುದ್ಧ ನಡೆಸುವ ಹೋರಾಟವಲ್ಲ. ಆಮಂತ್ರಣದಲ್ಲಿ ಹಿಂದುಯೇತರರ ಹೆಸರು ಮುದ್ರಿಸಬಾರದು ಎನ್ನುವುದಷ್ಟೇ ನಮ್ಮ ಆಕ್ಷೇಪ ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್ ಗೌರವ ಅಧ್ಯಕ್ಷ ಪೂವಪ್ಪ, ಭಕ್ತರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ಶೇಖರ್ ನಾರಾವಿ, ದಿನೇಶ್ ಜೈನ್, ಸಂಕಪ್ಪ ಗೌಡ, ಸುಧಾಕರ್ ಆರ್ಯಾಪು ಮತ್ತಿತತರರು ಹಿಂದಿನ ಉತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿ ಸದಸ್ಯರನ್ನು ಜತೆ ಸೇರಿಸಿ ಚರ್ಚೆ ನಡೆಸಬೇಕು. ಯತಿವರ್ಯರ ಸಭೆ ನಡೆಸಿ ಜತೆ ಸೇರಿಸಿಕೊಳ್ಳಬೇಕು. ಆಮಂತ್ರಣವನ್ನು ದಾಖಲೆಯಾಗಿ ಇರಿಸಿಕೊಳ್ಳುವ ಕಾರಣಕ್ಕೆ ಹಿಂದುಯೇತರರ ಹೆಸರು ಬಾರದಂತೆ ಎಚ್ಚರ ವಹಿಸಬೇಕು. ಉಗ್ರ ಹೋರಾಟ ಅನಿವಾರ್ಯ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News