ಚಿನ್ನ ಖರೀದಿಯ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವುದನ್ನು ಖಂಡಿಸಿ ಸ್ವರ್ಣೋಧ್ಯಮ ಹಿತರಕ್ಷಣಾ ಸಮಿತಿಯಿಂದ ಬೈಕ್ ರ್ಯಾಲಿ
ಮುಲ್ಕಿ, ಫೆ.16: ಕೇಂದ್ರ ಸರಕಾರ ಚಿನ್ನ ಖರೀದಿಯ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದು, ಸ್ವರ್ಣೋಧ್ಯಮಿಗಳು ಹಾಗೂ ಕಾರ್ಮಿಕರು ಕಂಗಾಲಾಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತೆ ಸ್ವರ್ಣೋಧ್ಯಮಿಗಳು ಹಾಗೂ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಲಿದೆ ಎಂದು ವಿಶ್ವಕರ್ಮ ಒಕ್ಕೂಟದ ದ.ಕ. ಉಡುಪಿ ಅಧ್ಯಕ್ಷ ಮಧು ಆಚಾರಿ ಹೇಳಿದರು.
ಕೇಂದ್ರ ಸರಕಾರ ಚಿನ್ನ ಖರೀದಿಯ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವುದನ್ನು ಖಂಡಿಸಿ ಮುಲ್ಕಿ, ಕಿನ್ನಿಗೋಳಿ, ಹಳೆಯಂಗಡಿ ಸ್ವರ್ಣೋಧ್ಯಮ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ನಡೆಸಿ ಮುಲ್ಕಿ ವಿಶೇಷ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಬಳಿಕ ಮಾತನಾಡಿದ ಹಳೆಯಂಗಡಿ ವಲಯಾಧ್ಯಕ್ಷ ಜಗದೀಶ್ ಪಡುಪಣಮಭೂರು, ಕೇಂದ್ರದ ಈ ನೀತಿಯಿಂದ ಬಡ ಸ್ವಣೋಧ್ಯಮಿಗಳು ಹಾಗೂ ಕಾರ್ಮಿಕರು ರಸ್ತೆಗೆ ಬೀಳುವ ಪರಿಸ್ಥಿತಿ ಬಂದೊದಗಿದೆ. ಸರಕಾರ ಚಿನ್ನದ ಕುಶಲ ಕರ್ಮಿಗಳಿಗೆ ಸೌಕರ್ಯಗಳನ್ನು ಕಲ್ಪಿಸಿ ಅವರ ಉನ್ನತಿಗೆ ಶ್ರಮಿಸಬೇಕು. ಹೆಚ್ಚುವರಿ ತೆರಿಗೆಯಿಂದ ಉಧ್ಯಮಕ್ಕೆ ಮಾತ್ರವಲ್ಲದೆ, ಸಾರ್ವಜನಿಕರಿಗೂ ತೊಂದರೆಗಳಾಗುತ್ತಿವೆ. ಸರಕಾರ ಶೀಘ್ರ ಹೆಚ್ಚುವರಿಯಾಗಿ ವಿಧಿಸಿರುವ ತೆರಿಗೆಯನ್ನು ರದ್ದುಗೊಳಿಸಬೆಕು ಎಂದು ಆಗ್ರಹಿಸಿದರು.
ಕಿನ್ನಿಗೋಳಿಯಿಂದ ಹಳೆಯಂಗಡಿ, ಮುಲ್ಕಿ ಪೇಟೆಯಾಗಿ ಬಂದ ಬೈಕ್ ರ್ಯಾಲಿ ಕಾರ್ನಾಡು ಗಾಂಧಿ ಮೈದಾನದಲ್ಲಿ ಸಮಾರೋಪಗೊಂಡು ಬಳಿಕ ಕಾಲ್ನಡಿಕೆ ಮೂಲಕ ಮುಲ್ಕಿ ವಿಶೇಷ ತಹಶೀಲ್ದಾರ್ ಅವರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭ ಸ್ವರ್ಣೋದ್ಯಮ ಹಿತರಕ್ಷಣಾ ಸಮಿತಿ ಕಿನ್ನಿಗೋಳಿ ವಲಯಾಧ್ಯಕ್ಷ ಉದಯಕುಮಾರ್, ಹಳೆಯಂಗಡಿ ವಲಯಾಧ್ಯಕ್ಷ ಕರುಣಾಕರ್ ಆಚಾರ್ಯ, ಮುಲ್ಕಿ ವಲಯಾಧ್ಯಕ್ಷ ನಾಗರಾಜ ಮುಲ್ಕಿ,. ಪ್ರಥ್ವಿರಾಜ್ ಆಚಾರ್ಯ ಕಿನ್ನಿಗೋಳಿ, ಮತ್ತು ಸುರತ್ಕಲ್, ಪಡುಬಿದ್ರೆ ಸ್ವರ್ಣೋದ್ಯಮ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಿದ್ದರು.