ನೇತ್ರಾವತಿ ಸೇತುವೆಯಿಂದ ಹಾರಿದವನ ಮೃತದೇಹ ಕಾಸರಗೋಡಿನಲ್ಲಿ ಪತ್ತೆ
ಉಳ್ಳಾಲ: ಕಳೆದ ಕೆಲ ದಿನಗಳ ಹಿಂದೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೈದ ಯುವಕನ ಶವ ಕಾಸರಗೋಡು ಸಮೀಪ ಸಮುದ್ರ ತೀರದಲ್ಲಿ ಮಂಗಳವಾರ ಪತ್ತೆಯಾಗಿದೆ. ಯುವಕನನ್ನು ತೊಕ್ಕೊಟ್ಟು ಟಿ.ಸಿ.ರೋಡಿನ ಕುಶನ್ (27) ಎಂದು ಗುರುತಿಸಲಾಗಿದೆ. ಸುಮಾರು ಎರಡು ವರ್ಷಗಳಿಂದ ಉಳ್ಳಾಲದ ಸ್ವಾತಿ ಬಾರಿನಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದ ಕುಶನ್ ಮಾ.11 ರಂದು ಮಧ್ಯಾಹ್ನ 11.00 ಗಂಟೆಗೆ ಬಸ್ಸು ಹತ್ತಿಕೊಂಡು ತೆರಳಿದವರು ನಾಪತ್ತೆಯಾಗಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಸಂಬಂಧಿ ಜಯಶ್ರೀ ಎಂಬವರು ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಮಾ.11 ರಂದು ಮಧ್ಯಾಹ್ನ 11.30ಕ್ಕೆ ನೇತ್ರಾವತಿ ಸೇತುವೆಯಿಂದ ಹಾರಿರುವುದನ್ನು ವಾಹನ ಸವಾರರು ಕಂಡಿದ್ದರು. ಅಲ್ಲದೆ ಮರಳು ತೆಗೆಯುತ್ತಿದ್ದ ದೋಣಿಯಲ್ಲಿದ್ದವರು ರಕ್ಷಣೆಗೆ ಮುಂದಾಗಿದ್ದರೂ ಅಷ್ಟರಲ್ಲಿ ಕುಶನ್ ಮುಳುಗಿದ್ದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿರಲಿಲ್ಲ. ಐದು ದಿನಗಳ ಬಳಿಕ ಕಾಸರಗೋಡಿನಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಅವಿವಾಹಿತರಾಗಿದ್ದ ಕುಶನ್ ತೊಕ್ಕೊಟ್ಟು ಕೆ.ಸಿ.ರೋಡಿನ ಬಾಡಿಗೆ ಮನೆಯಲ್ಲಿ ವಾಸವಿದ್ದರು.