ಮಾ : 20 ರಂದು ಸಾಲೆತ್ತೂರಿನಲ್ಲಿ ಬೊಲ್ಪು ದೈಸಿರೊ
ವಿಟ್ಲ : ಮಂಚಿ-ಕೊಳ್ನಾಡು ಇಲ್ಲಿನ ಬೊಲ್ಪು ಕಲಾ ತಂಡದ 19ನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೊಲ್ಪು ದೈಸಿರೊ-2016 ಸೌಹಾರ್ದ ಸಾಂಸ್ಕೃತಿಕ ಸಂಗಮ, ಚತುರ್ಭಾಷಾ ಸಾಂಸ್ಕೃತಿಕ ಕಾರ್ಯಕ್ರಮವು ಮಾ 20 ರಂದು ಸಾಲೆತ್ತೂರು ಬಯಲು ರಂಗ ಮಂದಿರಲ್ಲಿ ನಡೆಯಲಿದೆ. ಕಾಡುಮಠ ಶ್ರೀ ಮಹಮ್ಮಾಯಿ ದೇವಸ್ಥಾನದ ಅರ್ಚಕ ಸಂಜೀವ ಕಾಡುಮಠ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾಲೆತ್ತೂರು ನಿತ್ಯಾಧರ್ ಚರ್ಚ್‌ನ ಧರ್ಮಗುರು ಫಾ. ವಿನ್ಸೆಂಟ್ ಮಚಾದೊ ಅಶೀರ್ವಚನಗೈಯುವರು. ಅಪರಾಹ್ನ 3 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಭಕ್ತಿ ವೈಭವ, ಪುತ್ತೂರಿನ ಶ್ರೀಮತಿ ವತ್ಸಲಾ ನಾಯಕ್ ಮತ್ತು ಬಳಗದವರಿಂದ ಕೊಂಕಣಿ ಭಾಷಾ ನೃತ್ಯ ಕಾರ್ಯಕ್ರಮ, ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಫ್ ಪ್ರದರ್ಶನ, ಜೂನಿಯರ್ ರಾಜ್‌ಕುಮಾರ್‌ಖ್ಯಾತಿಯ ಜಗದೀಶ್ ಶಿವಪುರ ಮತ್ತು ಬಳಗದವರಿಂದ ಜಾನಪದ ಲಹರಿ, ಭಾವಗೀತೆ, ಪುತ್ತೂರಿನ ಹಾಸ್ಯ ಕಲಾವಿದರಿಂದ ತೆಲಿಪುಲೆ-ತೆಲಿಪಾಲೆ ಹಾಸ್ಯ ಸಂಜೆ, ಹಾಗೂ ಬೊಲ್ಪು ಯಕ್ಷ ಬಳಗ ಮತ್ತು ಜಿಲ್ಲೆಯ ಅತಿಥಿ ಕಲಾವಿದರಿಂದ ಧರ್ಮಸಂಗಮ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್, ತಾ.ಪಂ. ಸದಸ್ಯ ನಾರಾಯಣ ಶೆಟ್ಟಿ ಕುಳ್ಯಾರು, ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಸದಸ್ಯ ವಿಶ್ವನಾಥ ಶೆಟ್ಟಿ ಪೆರ್ಲದಬೈಲು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮಹಮ್ಮದ್ ಹನೀಫ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ. ಕುಲಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ. ಬಿ. ಮೊದಲಾದವರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸುಮಾರು 25 ವರ್ಷಗಳಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಯಶೋಧ ವಿ. ಭಂಡಾರಿ ಇವರಿಗೆ ಬೊಲ್ಪು ಕಲಾ ತಂಡದ ಪ್ರತಿಷ್ಠಿತ ಬೊಳ್ಳಿ ಬೊಲ್ಪು ಪ್ರಶಸ್ತಿ ಪುರಸ್ಕಾರ ಹಾಗೂ ತಂಡದ ಹಿರಿಯ ಕಲಾವಿದ ವೆಂಕಪ್ಪ ಪಾಲ್ತಾಜೆ ಇವರಿಗೆ ಗೌರವ ಸನ್ಮಾನ ನಡೆಯಲಿದೆ ಎಂದು ತಂಡದ ಸಂಚಾಲಕ ಕೊರಗಪ್ಪ ಶಿಂಗಾರಕೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.