ರಾಜ್ಯಸಭೆಯ ತಿದ್ದುಪಡಿಗಳನ್ನು ಕೈಬಿಟ್ಟು ಆಧಾರ್ ಮಸೂದೆ ಅಂಗೀಕರಿಸಿದ ಲೋಕಸಭೆ
ಹೊಸದಿಲ್ಲಿ,ಮಾ.16: ರಾಜ್ಯಸಭೆಯು ಮಾಡಿದ್ದ ತಿದ್ದುಪಡಿಗಳನ್ನು ಬುಧವಾರ ಲೋಕಸಭೆಯು ತಿರಸ್ಕರಿಸಿದ ನಂತರ ವಿಶಿಷ್ಟ ಗುರುತಿನ ಸಂಖ್ಯೆ ಯೋಜನೆಗೆ ಬಲ ನೀಡುವ ಆಧಾರ್ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರಗೊಂಡಿತು.
ಬಜೆಟ್ ಪರಿಶೀಲನೆಗಾಗಿ ಎ.25ಕ್ಕೆ ಮುಂದೂಡಲ್ಪಡುವ ಕೆಲವೇ ನಿಮಿಷಗಳ ಮೊದಲು ಲೋಕಸಭೆಯು ಪ್ರತಿಪಕ್ಷ ಸದಸ್ಯರ ಸಭಾತ್ಯಾಗದ ನಡುವೆಯೇ ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಲಾಭಗಳು ಮತ್ತು ಸೇವೆಗಳು)ಮಸೂದೆ, 2016ನ್ನು ಧ್ವನಿಮತದೊಂದಿಗೆ ಅಂಗೀಕರಿಸಿತು.
ರಾಜ್ಯಸಭೆಯು ಮಸೂದೆಗೆ 11 ತಿದ್ದುಪಡಿಗಳನ್ನು ಸೂಚಿಸಿ ಅದನ್ನು ಬುಧವಾರ ಲೋಕಸಭೆಗೆ ಮರಳಿಸಿತ್ತು.
ಲೋಕಸಭೆಯು ಆರಂಭದಲ್ಲಿ ಇದನ್ನು ಧನ ವಿಧೇಯಕವನ್ನಾಗಿ ಅಂಗೀಕರಿಸಿತ್ತು. ಅಂದರೆ ರಾಜ್ಯಸಭೆಯು ತಿದ್ದುಪಡಿಗಳನ್ನು ಮಾಡಲು ಅವಕಾಶವಿರಲಿಲ್ಲ,ಅದು ತಿದ್ದುಪಡಿಗಾಗಿ ಲೋಕಸಭೆಗೆ ಶಿಫಾರಸುಗಳನ್ನು ಸೂಚಿಸಬಹುದಾಗಿತ್ತು...ಅಷ್ಟೇ. ರಾಜ್ಯಸಭೆಯು ಸೂಚಿಸಿದ ಶಿಫಾರಸುಗಳನ್ನು ಅಳವಡಿಸಿಕೊಂಡು ಅಥವಾ ಅವುಗಳನ್ನು ಕೈಬಿಟ್ಟು ಲೋಕಸಭೆಯು ಧನ ವಿಧೇಯಕವನ್ನು ಅಂಗೀಕರಿಸಿದರೆ ಸಂಸತ್ತಿನ ಉಭಯ ಸದನಗಳೂ ಅದನ್ನು ಅಂಗೀಕರಿಸಿವೆ ಎಂದು ಪರಿಗಣಿಸಲಾಗುತ್ತದೆ.
ಕೊನೆಯ ಘಳಿಗೆಯ ಪ್ರಯತ್ನವಾಗಿ ಪ್ರತಿಪಕ್ಷ ಸದಸ್ಯರು ಹಿರಿಯರ ಸದನದ ‘ಬುದ್ಧಿಮತ್ತೆ’ಯನ್ನು ಗೌರವಿಸುವಂತೆ ಮತ್ತು ಅವರ ಶಿಫಾರಸುಗಳನ್ನು ಒಪ್ಪಿಕೊಳ್ಳುವಂತೆ ಸರಕಾರವನ್ನು ವಿನಂತಿಸಿಕೊಂಡಿದ್ದರು.