×
Ad

ಚುಟುಕು ಸುದ್ದಿಗಳು

Update: 2016-03-16 23:45 IST

ಇಂದು ಕಾನೂನು ಸಚಿವ ಡಿವಿ ಪ್ರವಾಸ

ಮಂಗಳೂರು, ಮಾ.16: ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಮಾ.17ರಂದು ಮಂಗಳೂರಿಗೆ ಆಗಮಿಸಲಿದ್ದು, ಅಪರಾಹ್ನ 3:30ಕ್ಕೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆಯುವ ಗಾಂಧಿ ವಿಚಾರಧಾರೆಗಳ ಕುರಿತ ವಿಚಾರ ಸಂಕಿರಣದ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ನಗರದಲ್ಲಿ ವಾಸ್ತವ್ಯ ಹೂಡಿ ಮಾ.19ರಂದು ಬೆಳಗ್ಗೆ 7ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಲೋಕಾಯುಕ್ತ ಅಧಿಕಾರಿಗಳ ಪ್ರವಾಸ
ಮಂಗಳೂರು, ಮಾ.16: ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ದೂರು ಸ್ವೀಕರಿಸಲಿದ್ದಾರೆ. ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಲಾಗುವುದು. ಭರ್ತಿ ಮಾಡಿ, ನೋಟರಿಯಿಂದ ಅಫಿದವಿತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇತರ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪತ್ರದಲ್ಲಿ ನೀಡಬಹುದಾಗಿದೆ ಹಾಗೂ ಸ್ಥಳದಲ್ಲೇ ಇತ್ಯರ್ಥಪಡಿಸಬಹುದಾದ ದೂರುಗಳನ್ನು ಅಲ್ಲೇ ಇತ್ಯರ್ಥಪಡಿಸಲಾಗುವುದು. ಮಾ.22ರಂದು ಪೂ.11ರಿಂದ ಮಧ್ಯಾಹ್ನ 1ರವರೆಗೆ ಮೂಡುಬಿದಿರೆ ವಿಶೇಷ ತಹಶೀಲ್ದಾರರ ಕಚೇರಿ, ಮಾ.23ರಂದು ಪೂ.11ರಿಂದ ಮಧ್ಯಾಹ್ನ 1ರವರೆಗೆ ಬೆಳ್ತಂಗಡಿ ತಾಲೂಕು ಕಚೇರಿ, ಮಾ.23ರಂದು ಅಪರಾಹ್ನ 3ರಿಂದ ಸಂಜೆ 4:30ರವರೆಗೆ ಬಂಟ್ವಾಳದ ಸರಕಾರಿ ಅತಿಥಿ ಗೃಹ (ಐ.ಬಿ.), ಮಾ.29ರಂದು ಪೂ.11ರಿಂದ ಮಧ್ಯಾಹ್ನ 1ರವರೆಗೆ ಸುಳ್ಯ ತಾಲೂಕು ಕಚೇರಿ, ಅಪರಾಹ್ನ 3ರಿಂದ ಸಂಜೆ 4:30ರವರೆಗೆ ಪುತ್ತೂರು ತಾಲೂಕು ಕಚೇರಿಯಲ್ಲಿ ಅರ್ಜಿಗಳನ್ನು ಸ್ವೀಕರಿಸುವರು. ಮಾಹಿತಿಗಾಗಿ ದೂ.ಸಂ.: 9480032283, 0824-2429197, 9448012324ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆೆ ತಿಳಿಸಿದೆ.

ಗೃಹರಕ್ಷಕರ ನೇಮಕಾತಿ
ಮಂಗಳೂರು, ಮಾ.16: ಮಂಗಳೂರು ನಗರದಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಾಗೂ ವಿವಿಧ ಇಲಾಖೆಗಳಲ್ಲಿ ಚಾಲಕರಾಗಿ ಹಾಗೂ ಇತರ ಕರ್ತವ್ಯ ನಿರ್ವಹಿಸಲು ಗೃಹ ರಕ್ಷಕರನ್ನು ಸ್ವಯಂ ಸೇವಕರಾಗಿ ನೇಮಕಮಾಡಿಕೊಳ್ಳಲಾಗುವುದು. ಸ್ವಯಂಸೇವಾ ಮನೋಭಾವವಿರುವ ಅರ್ಹ ಪುರುಷ ಅಭ್ಯರ್ಥಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮಂಗಳೂರು, ಪಣಂಬೂರು, ಮುಲ್ಕಿ, ಸುರತ್ಕಲ್ ಮತ್ತು ಮೂಡುಬಿದಿರೆ ಘಟಕಗಳಲ್ಲಿ ಗೃಹರಕ್ಷಕರಾಗಿ ನೇಮಕ ಮಾಡಿಕೊಳ್ಳಲಾಗುವುದು. ಆಸಕ್ತ 20ರಿಂದ 45 ವರ್ಷ ವಯಸ್ಸಿನ 7ನೆ ತರಗತಿ ಮತ್ತು ಮೇಲ್ಪಟ್ಟು ವಿದ್ಯಾಭ್ಯಾಸ ಹೊಂದಿರುವ ಸ್ಥಳೀಯ ನಿರುದ್ಯೋಗಿ, ಯುವಕರು ಸದಸ್ಯರಾಗಿ ಸೇರಬಹುದಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಸದಸ್ಯರಿಗೆ ದಿನವೊಂದಕ್ಕೆ 325 ರೂ. ಕರ್ತವ್ಯ ಭತ್ತೆ ನೀಡಲಾಗುವುದು. ಆಸಕ್ತರು ಜಿಲ್ಲಾ ಗೃಹರಕ್ಷಕದಳದ ಕಚೇರಿ (ಮೇರಿಹಿಲ್ ಹೆಲಿಪ್ಯಾಡ್ ಹತ್ತಿರ ಮಂಗಳೂರು-8)-ದೂ.ಸಂ.: 0824-2220562)ಯಿಂದ ಅರ್ಜಿ ಪಡೆಯಬಹುದು ಎಂದು ಪ್ರಕಟನೆೆ ತಿಳಿಸಿದೆ.

‘ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಂಘಟಿತ ಪ್ರಯತ್ನ’
ಪುತ್ತೂರು, ಮಾ.16: ಜಿಲ್ಲೆಯಲ್ಲಿ ರೈತರಿಗೆ ಹಲವಾರು ಸಮಸ್ಯೆಗಳಿದ್ದು, ಸಮಸ್ಯೆಗಳನ್ನು ಬಗೆಹರಿಸಲು ಸಂಘಟಿತ ಪ್ರಯತ್ನ ನಡೆಸಲಾಗುವುದು. ರೈತರಿಗೆ ಸಮಸ್ಯೆ ಎದುರಾದಾಗ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ 16 ಬ್ಲಾಕ್‌ಗಳಲ್ಲಿ ಕ್ರಿಯಾಶೀಲ ರೈತರನ್ನು ಪದಾಧಿಕಾರಿಗಳನ್ನಾಗಿ ನೇಮಿಸುವ ಕೆಲಸ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್‌ನ ಕಿಸಾನ್ ಘಟಕದ ನೂತನ ಅಧ್ಯಕ್ಷ ಉಮಾನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರತಿ ಬ್ಲಾಕ್ ಮಟ್ಟದಿಂದಲೇ ಕ್ರಿಯಾಶೀಲ ರೈತರನ್ನು ಗುರುತಿಸಿ, ಜಿಲ್ಲಾ ಘಟಕದ ಸಹಕಾರದೊಂದಿಗೆ ಸಂಘಟನೆಯ ಕಡೆಗೆ ಗಮನ ಹರಿಸಲಾಗುವುದು. ರೈತರ ಸಮಸ್ಯೆ ಗುರುತಿಸಿ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಮ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಪುತ್ತೂರು ಕಿಸಾನ್ ಘಟಕದ ಅಧ್ಯಕ್ಷ ಎ.ಕೆ. ಜಯರಾಮ ರೈ ಉಪಸ್ಥಿತರಿದ್ದರು.

ಇಂದು ಶಾಸಕರಿಂದ ಅಹವಾಲು ಸ್ವೀಕಾರ
ಉಡುಪಿ, ಮಾ.16: ಉಡುಪಿ ಶಾಸಕ ಹಾಗೂ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ಮಾ.17ರಂದು ಪೂರ್ವಾಹ್ನ 11ರಿಂದ 12ರವರೆಗೆ ಉಡುಪಿಯ ತನ್ನ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.

ವಾಹನ ಹರಾಜು
ಮಂಗಳೂರು, ಮಾ.16: ಮಂಗ ಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಯ ಟಾಟಾ ಮೊಬೈಲ್ 1998 (ಕೆ.ಎ-19-ಜಿ-8036) ವಾಹ ನ ವನ್ನು ಎ.12ರಂದು ಪೂರ್ವಾಹ್ನ 11ಕ್ಕೆ ವೆನ್ಲಾಕ್ ಆವರಣದಲ್ಲಿ ಬಹಿರಂಗ ಹರಾಜು ಮಾಡ ಲಾಗುವುದು. ಆಸಕ್ತರು ಎ.11ರೊಳಗೆ ಟೆಂಡರ್ ಫಾರಂನ್ನು ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರಿಂದ ಪಡೆದು, ಎ.12ರಂದು ಬೆಳಗ್ಗೆ 10ರೊಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ವೆನ್ಲಾಕ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಇಂದು ಪ್ರಿ ಬಿಡ್ ಸಭೆ
ಮಂಗಳೂರು, ಮಾ.16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸಿಆರ್‌ಝಡ್ ಹೊರತಾದ ಪ್ರದೇಶದಲ್ಲಿ 30 ಮರಳು ಬ್ಲಾಕ್‌ಗಳಿಗೆ ಕರೆಯಲಾಗಿರುವ ಅಲ್ಪಾವಧಿ ಟೆಂಡರ್‌ಗೆ ಸಂಬಂಧಪಟ್ಟಂತೆ ಮಾ.17 ರಂದು ಬೆಳಗ್ಗೆ 9:30ಕ್ಕೆ ದ.ಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಿ ಬಿಡ್ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಆಸಕ್ತಿಯುಳ್ಳ ಬಿಡ್‌ದಾರರು ಭಾಗವಹಿಸಿ ಟೆಂಡರ್ ಪ್ರಕ್ರಿಯೆಯ ಸಂಬಂಧ ಸಲಹೆ ಸೂಚನೆಗಳನ್ನು ಪಡೆಯುವಂತೆ ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

ಮಾ.19: ‘ತುಳು ರಂಗಭೂಮಿಯಲ್ಲಿ ಮಹಿಳೆಯರು’ ಕಾರ್ಯಕ್ರಮ
ಮಂಗಳೂರು, ಮಾ.16: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಸದಾನಂದ ಸುವರ್ಣ ದತ್ತಿನಿಧಿ ಯೋಜನೆಯಡಿ ನಗರದ ಉರ್ವಸ್ಟೋರ್‌ನಲ್ಲಿರುವ ತುಳುಭವನದ ಸಿರಿಚಾವಡಿಯಲ್ಲಿ ಮಾ.19ರಂದು ಅಪರಾಹ್ನ 2:30ಕ್ಕೆ ‘ಮಹಿಳಾ ದಿನಾಚರಣೆ ಪ್ರಯುಕ್ತ ‘ತುಳು ರಂಗಭೂಮಿಯಲ್ಲಿ ಮಹಿಳೆಯರು’ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿರುವುದು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ವಹಿಸಲಿದ್ದಾರೆ. ರಂಗಭೂಮಿ ಸಾಧಕರಾದ ಚಿತ್ರಾಂಜಲಿ, ಶಾರದಾ ಬಾರ್ಕೂರು, ಆನಂದ ಶೆಟ್ಟಿ, ರೋಹಿಣಿ ಜಗರಾಂ, ಗಣೇಶ್ ಕುಮಾರ್‌ರಿಗೆ ಚಾವಡಿ ಸನ್ಮಾನ ನಡೆಯಲಿದೆ. ಸಭಾಕಾರ್ಯಕ್ರಮದ ಬಳಿಕ ಸುಧೀರ್ ರಾಜ್ ಉರ್ವ ರಚಿಸಿ - ನಿರ್ದೇಶಿಸಿದ ‘ಗೆಜ್ಜೆ ಪಾತೆರ್ನಗ ಪಜ್ಜೆ ನಲ್ತ್‌ಂಡ್’ ಕಿರು ನಾಟಕ ಪ್ರದರ್ಶನ ನಡೆಯಲಿದೆ ಎಂದು ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

ಮಾ.21ರಿಂದ ಗ್ರಾಮ ಸಭೆ ನಡೆಸಲು ಸೂಚನೆ
ಮಂಗಳೂರು, ಮಾ.16: ಪ್ರಸಕ್ತ ಸಾಲಿನ ಪುತ್ತೂರು ತಾಲೂಕಿನ 41 ಗ್ರಾಪಂಗಳಲ್ಲಿ 2015-16ನೆ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಗಳನ್ನು ಮಾರ್ಚ್ 21ರಿಂದ ಆರಂಭಿಸುವಂತೆ ಪುತ್ತೂರು ತಾಪಂ ಇಒ ತಾಲೂಕಿನ ಎಲ್ಲ ಗ್ರಾಪಂ ಪಿಡಿಒ, ಕಾರ್ಯದರ್ಶಿಗಳಿಗೆ ಸುತ್ತೋಲೆ ಮೂಲಕ ತಿಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಮೆಲ್ಕಾರ್: ಮಾ.20ರಂದು ರಕ್ತದಾನ ಶಿಬಿರ
ಬಂಟ್ವಾಳ, ಮಾ. 16: ತಾಲೂಕು ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಮತ್ತು ಮೆಲ್ಕಾರ್ ಆಟೊ ಚಾಲಕ ಮಾಲಕರ ಸಂಘ, ಮಂಗಳೂರು ಕೆಎಂಸಿ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಸೌಹಾರ್ದ ರಕ್ತದಾನ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮ ಮಾ. 20ರಂದು ಮೆಲ್ಕಾರ್ ಜಂಕ್ಷನ್ ಸರಾ ಆರ್ಕೆಡ್ ಬಳಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News