×
Ad

ಸಿಬಿಎಸ್‌ಇ ಗಣಿತ ಪ್ರಶ್ನೆಪತ್ರಿಕೆ ತನಿಖೆಗೆ ಅರ್ಹ: ವೆಂಕಯ್ಯ ನಾಯ್ಡು

Update: 2016-03-16 23:49 IST

ಹೊಸದಿಲ್ಲಿ, ಮಾ.16: ಸಿಬಿಎಸ್‌ಇ 12ನೆ ತರಗತಿಯ ಗಣಿತ ಪ್ರಶ್ನೆಪತ್ರಿಕೆಯ ಕುರಿತು ವಿದ್ಯಾರ್ಥಿಗಳ ಅಸಮಾಧಾನ ಇಂದು ಸಂಸತ್‌ನಲ್ಲಿ ಪ್ರತಿಧ್ವನಿಸಿದೆ. ಈ ವಿಷಯ ‘ವಿಚಾರಣೆಗೆ ಅರ್ಹವಾಗಿದ್ದು’, ತಾನಿದನ್ನು ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆ ಸ್ಮತಿ ಇರಾನಿಯವರ ಗಮನಕ್ಕೆ ತರುತ್ತೇನೆಂದು ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಇಲ್ಲಿ ಎರಡು ವಿಚಾರಗಳಿವೆ. ಕೆಲವು ಪ್ರಶ್ನೆ ಪತ್ರಿಕೆಗಳು ಅತ್ಯಂತ ಕಠಿಣವಾಗಿದ್ದವು. ಅತ್ಯಂತ ಬುದ್ಧಿವಂತ ವಿದ್ಯಾರ್ಥಿಗೂ ಅವುಗಳನ್ನು ಪರಿಣಾಮಕಾರಿಯಾಗಿ ಉತ್ತರಿಸಲು ಸಾಧ್ಯವಿರಲಿಲ್ಲ.

ಕೆಲವು ಪ್ರಶ್ನೆಗಳು ಸೋರಿಕೆಯಾಗಿವೆ ಹಾಗೂ ಮಾರಾಟವೂ ಆಗಿವೆಯೆಂದು ಮಾಧ್ಯಮಗಳು ವರದಿ ಮಾಡಿವೆಯೆಂದು ಅವರು ತಿಳಿಸಿದರು.
ಇದು ವಿದ್ಯಾರ್ಥಿಗಳಿಗೆ ಹಾಗೂ ಅವರ ಭವಿಷ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಇದು ವಿಚಾರಣೆಗೆ ಅರ್ಹವಾಗಿದೆ. ಇದನ್ನು ತಾನು ಎಚ್‌ಆರ್‌ಡಿ ಸಚಿವೆಗೆ ತಿಳಿಸುತ್ತೇನೆಂದು ನಾಯ್ಡು ಹೇಳಿದರು.

ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್ ಹಾಗೂ ಆರೆಸ್ಪಿಯ ಪ್ರೇಮಚಂದ್ರನ್ ನಿನ್ನೆ ಈ ವಿಷಯ ಪ್ರಸ್ತಾಪಿಸಿದ್ದರು. ಪರೀಕ್ಷೆಯ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ತಾನು ಸರಕಾರವನ್ನು ಒತ್ತಾಯಿಸುತ್ತಿದ್ದೇನೆಂದು ವೇಣುಗೋಪಾಲ್ ತಿಳಿಸಿದ್ದರು.

ಭಾರತಾದ್ಯಂತ ಸುಮಾರು 20 ಸಾವಿರ ಸಂಯೋಜಿತ ಶಾಲೆಗಳಿರುವ ಸಿಬಿಎಸ್‌ಇ ಕಠಿಣ ಹಾಗೂ ದೀರ್ಘ ಗಣಿತ ಪತ್ರಿಕೆಯ ಕುರಿತು ದೂರಿನ ಬಗ್ಗೆ ಇದುವರೆಗೆ ಪ್ರತಿಕ್ರಿಯಿಸಿಲ್ಲ.

ಪ್ರಶ್ನೆಪತ್ರಿಕೆ ದೀರ್ಘವಾಗಿದ್ದು, ತಮ್ಮಿಂದ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲವೆಂದು ಅನೇಕ ವಿದ್ಯಾರ್ಥಿಗಳು ಹೇಳಿದ್ದಾರೆ. ಈ ವಿಷಯವನ್ನು ಪರಿಶೀಲಿಸುವಂತೆ ತಾನು ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆಯನ್ನು ವಿನಂತಿಸುತ್ತಿದ್ದೇನೆ. ವೌಲ್ಯ ಮಾಪನದಲ್ಲಿ ಉದಾರತೆ ತೋರುವಂತೆ ಅವರು ಸಿಬಿಎಸ್‌ಇಗೆ ಸೂಚಿಸಲಿ ಎಂದು ಎಡಿಎಂಕೆ ಸದಸ್ಯ ಎಸ್.ಆರ್. ವಿಜಯಕುಮಾರ್ ಹೇಳಿದರು.

ಆನ್‌ಲೈನ್ ವೇದಿಕೆಗಳಲ್ಲಿ ದೇಶಾದ್ಯಂತದಿಂದ ದೂರುಗಳ ಮಹಾಪೂರವೇ ಹರಿದುಬರುತ್ತಿದೆ. 2015ರಲ್ಲಿ ಇಂತಹದೇ ದೂರುಗಳ ಬಳಿಕ ಪರೀಕ್ಷಾ ಮಂಡಳಿಯು ಗಣಿತ ಪ್ರಶ್ನೆಪತ್ರಿಕೆಯನ್ನು ಮರುಪರಿಶೀಲಿಸಬೇಕಾಯಿತು. ಅಂಕ ನೀಡುವಲ್ಲಿ ಉದಾರತೆ ತೋರುವ ಬಗ್ಗೆಯೂ ಅದು ಪರಿಗಣಿಸಿತ್ತು.
ಮಾ.14ರಂದು ನಡೆದ ಗಣಿತ ಪರೀಕ್ಷೆಗೆ ಹಾಜರಾಗಿದ್ದ ಹೆಚ್ಚಿನ ವಿದ್ಯಾರ್ಥಿಗಳು ಪತ್ರಿಕೆಯು ‘ಅಸಾಧಾರಣವಾಗಿ ಕಠಿಣವಾಗಿತ್ತು ಹಾಗೂ ಉದ್ದವಾಗಿತ್ತು’ ಎಂದು ದೂರಿದ್ದಾರೆ. ಅನೇಕರು ಪರೀಕ್ಷಾ ಕೊಠಡಿಗಳಿಂದ ಕಣ್ಣೀರು ಸುರಿಸುತ್ತಲೇ ನಿರ್ಗಮಿಸಿದ್ದರು. ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ವರದಿಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News