×
Ad

ಮಹಾವೀರ ಕಾಲೇಜಿನಲ್ಲಿ ಕಂಪ್ಯೂಟರೀಕೃತ ಟೆಲಿಸ್ಕೋಪ್ ಉದ್ಘಾಟನೆ

Update: 2016-03-16 23:50 IST

ಮೂಡುಬಿದಿರೆ, ಮಾ.16: ಯುಜಿಸಿ ಅನುದಾನದಿಂದ 12.50 ಲಕ್ಷ ರೂ. ವೆಚ್ಚದಲ್ಲಿ ಅಮೇರಿಕದಿಂದ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿಗೆ ಇತ್ತೀಚೆಗೆ ತರಿಸಿಕೊಳ್ಳಲಾದ ‘ಸ್ಮಿತ್ ಕ್ಯಾಸಗ್ರೈನ್ ಸೆಲೆಸ್ಟ್ರಾನ್ ಟೆಲಿಸ್ಕೋಪ್’ನ್ನು ಕಾಲೇಜಿನ ಸುವರ್ಣಮಹೋತ್ಸವ ಕಟ್ಟಡದ ತಾರಸಿಯಲ್ಲಿ ಅಳವಡಿಸಲಾಗಿದ್ದು, ಕಾಲೇಜಿನ ವಿಶ್ವಸ್ಥ ಮಂಡಳಿಯ ಕೋಶಾಧಿಕಾರಿ ಪಿ.ಎಸ್. ಭಟ್ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಟೆಲಿಸ್ಕೋಪ್ ಮೂಲಕ ಖಗೋಳಶಾಸ್ತ್ರದ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಸುವಂತಾಗಲಿ. ಸಾರ್ವಜನಿಕರು, ಖಗೋಳಾಭ್ಯಾಸಿಗಳು ಮತ್ತು ಸಂಶೋಧಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

   ಮಹಾವೀರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ್ ದೀಕ್ಷಿತ್ ಸ್ವಾಗತಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿ, ಕಾಲೇಜಿನ ಭೌತಶಾಸ್ತ್ರ ವಿಭಾಗದ ಬೋಧಕ, ಮಹಾವೀರ ಪ.ಪೂ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಭಾರ್ಗವ ವಂದಿಸಿ, ಮುಖ್ಯ ಗ್ರಂಥಪಾಲಕಿ ನಳಿನಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಮತ್ತು ಖಗೋಳಾಸಕ್ತ ಸಾರ್ವಜನಿಕರು ಉಪಸ್ಥಿತರಿದ್ದರು.

ಸಂಶೋಧನೆಗೆ ಟೆಲಿಸ್ಕೋಪ್ ಪೂರಕ ಆಕಾಶಕಾಯಗಳ ಕುರಿತ ಸಂಶೋಧನೆಗೆ ನೆರವಾಗಬಲ್ಲ ಈ 14 ಇಂಚು ವ್ಯಾಸದ, ಪೂರ್ಣ ಕಂಪ್ಯೂಟರೀಕೃತ ಅತ್ಯಾಧುನಿಕ ಟೆಲಿಸ್ಕೋಪ್‌ನಲ್ಲಿ 40 ಸಾವಿರಕ್ಕಿಂತಲೂ ಹೆಚ್ಚಿನ ನಕ್ಷತ್ರಗಳು, ಆಕಾಶಕಾಯಗಳು, ಗ್ರಹಗಳನ್ನು ವೀಕ್ಷಿಸುವ ಸೌಲಭ್ಯವಿದೆ. ಬರಿಗಣ್ಣಿನಿಂದ ನೋಡಲಾಗದ ಸೂರ್ಯನನ್ನೂ ಸೂಕ್ತ ಫಿಲ್ಟರ್ ಬಳಸಿ ವೀಕ್ಷಿಸಬಹುದು. ಮಂಗಳ ಗ್ರಹದ ಮೇಲ್ಮೈ ಲಕ್ಷಣಗಳನ್ನೂ ಅಭ್ಯಸಿಸಬಹುದು. ಟೆಲಿಸ್ಕೋಪ್‌ನಲ್ಲಿರುವ ರಿಮೋಟ್ ಬಳಸಿ ಬೇಕಾದ ಆಕಾಶಕಾಯಗಳ ಹೆಸರನ್ನು ಟೈಪ್ ಮಾಡಿ ಬಟನ್ ಒತ್ತಿದಲ್ಲಿ, ಲೆನ್ಸ್‌ಗಳು ಅದಕ್ಕೆ ಮಾತ್ರ ಫೋಕಸ್ ಮಾಡುವುದರಿಂದ ಅವುಗಳನ್ನು ಸುಲಭದಲ್ಲಿ ವೀಕ್ಷಿಸಲು ಸಾಧ್ಯವಿದೆ. ಭೂಮಿಯಿಂದ ಅತ್ಯಂತ ದೂರದಲ್ಲಿರುವ ಗ್ಯಾಲಕ್ಸಿ, ನೆಬ್ಯುಲಾಗಳನ್ನೂ ಇದರಲ್ಲಿ ವೀಕ್ಷಿಸಬಹುದು ಎಂದು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ್ ದೀಕ್ಷಿತ್ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ರಮೇಶ್ ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News