ಮೂಡುಬಿದಿರೆ : ಮುಂದಿನ ಚುನಾವಣೆಗೆ 17600 ಮತದಾರರನ್ನು ಪಕ್ಷಕ್ಕೆ ಸೇರಿಸಲು ಸನ್ನದ್ಧರಾಗಿ : ಸಚಿವ ಅಭಯಚಂದ್ರ ಕರೆ
ಮೂಡುಬಿದಿರೆ : ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳು ಆಡಳಿತವನ್ನು ನಡೆಸಿವೆ ಆದರೆ ಜನರಿಗೆ ಶಕ್ತಿ ತುಂಬಿ ಜನರ ಧ್ವನಿಯಾಗಿರುವ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ 17600 ಜನ ಹೊಸ ಮತದಾರರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಕಾರ್ಯಕರ್ತರು ಸನ್ನದ್ಧರಾಗಬೇಕಾಗಿದೆ ಎಂದು ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಕರೆ ನೀಡಿದರು. ಅವರು ಇಲ್ಲಿನ ಸಮಾಜ ಮಂದಿರದಲ್ಲಿ ಗುರುವಾರದಂದು ಬ್ಲಾಕ್ ಕಾಂಗ್ರೆಸ್ ಮೂಡುಬಿದಿರೆ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಾಲೂಕು ಪಂಚಾಯತ್ ಸದಸ್ಯರಿಗೆ, ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಅಭಿನಂದನೆ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಚುನಾಯಿತ ಜನಪ್ರತಿನಿಧಿಗಳನ್ನು ಗೌರವಿಸಿ ಮಾತನಾಡಿದರು. ಸೋಲು ಗೆಲುವು ಪ್ರತಿ ಕ್ಷೇತ್ರದಲ್ಲಿಯೂ ಇರುತ್ತದೆ ಆದರೆ ಕಾರ್ಯಕರ್ತರು ಇದಕ್ಕೆ ದೃತಿಗೆಡಬಾರದು.
ಬಿಜೆಪಿಗರು ಸತ್ಯವನ್ನು ಸುಳ್ಳು ಮಾಡುವವರು. ದೇಶದಲ್ಲಿ ಭ್ರಷ್ಟಾಚಾರ ಕಾನೂನು ತಂದವರು ಬಿಜೆಪಿಗರು ಹಾಗೂ ಭ್ರಷ್ಟಾಚಾರವನ್ನು ಮಾಡಿ ಜೈಲಿಗೆ ಹೋದವರೂ ಬಿಜಿಪಿಗರು ಎಂದು ಲೇವಡಿ ಮಾಡಿದ ಅಭಯಚಂದ್ರ ಅವರು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ 176 ಬೂತ್‌ಗಳಿವೆ. ಜನರಿಗೆ ಮತ್ತು ಕಾರ್ಯಕರ್ತರಿಗೆ ಆತ್ಮಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಬೂತ್‌ಮಟ್ಟದಲ್ಲಿಯೂ ಕಮಿಟಿಗಳನ್ನು ಮಾಡಿ ಪ್ರತಿಯೊಂದು ಬೂತ್‌ನಲ್ಲಿಯೂ 100 ಮಂದಿ ಹೊಸ ಮತದಾರರನ್ನು ಸೇರ್ಪಡೆಗೊಳಿಸುವಂತಹ ಕೆಲಸವನ್ನು ಕಾರ್ಯಕರ್ತರು ಮಾಡಿದಾಗ ಮುಂದಿನ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಭಿನಂದನೆ : ಜಿ.ಪಂ ಸದಸ್ಯ ಯು.ಪಿ.ಇಬ್ರಾಹಿಂ, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ವಿಜೇತರಾಗಿರುವ ಸದಸ್ಯರುಗಳಾದ ರೀಟಾ ಕುಟಿನ್ಹಾ, ಪ್ರಶಾಂತ್ ಅಮೀನ್, ಸುಕುಮಾರ್ ಸನಿಲ್, ಪ್ರಕಾಶ್ ಗೌಡ ಹಾಗೂ ಸಚಿನ್ ಅಡಪ ಅವರನ್ನು ಸಚಿವ ಅಭಯಚಂದ್ರ ಜೈನ್ ಅಭಿನಂದಿಸಿದರು. ಪಕ್ಷಕ್ಕೆ ಸೇರ್ಪಡೆ : ಇದೇ ಸಂದರ್ಭದಲ್ಲಿ ಸುದತ್ತ ಜೈನ್ ಸಹಿತ ಹಲವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ, ಪುರಸಭಾ ಸದಸ್ಯ ಪಿ.ಕೆ.ತೋಮಸ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಮಹಿಳಾ ಘಟಕದ ಮೇರಿ ಪಿರೇರಾ, ಪುರಸಭಾ ಅಧ್ಯಕ್ಷೆ ರೂಪಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಸ್ವಾಗತಿಸಿದರು. ರತ್ನಾಕರ ಸಿ.ಮೊಯಿಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.