ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಕ್ರಿಯೆ ಕುರಿತು ಸೌದಿ ಅರೇಬಿಯದ ಐಡಿಬಿ ಅಧಿಕಾರಿಗಳು ಭಾರತಕ್ಕೆ
ಹೊಸದಿಲ್ಲಿ, ಮಾರ್ಚ್.17: ಇಸ್ಲಾಮಿಕ್ ಬ್ಯಾಂಕ್ ಎಂಬ ಆಶಯ ಭಾರತದಲ್ಲಿ ಜಾರಿಗೊಳಿಸಬಹುದೇ? ಇದರ ಪ್ರಯತ್ನದ ಅಂಗವಾಗಿ ಸೌದಿ ಅರೇಬಿಯನ್ ಬ್ಯಾಂಕ್ ರಂಗ ಪ್ರವೇಶಿಸಿದೆ. ರಿಸರ್ವ್‌ಬ್ಯಾಂಕ್‌ಗೆ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟು ಇಸ್ಲಾಮಿಕ್ ಬ್ಯಾಂಕ್ ಎಂಬ ಆಶಯ ಭಾರತದಲ್ಲಿ ಸಕ್ರಿಯಗೊಳಿಸುವ ಶ್ರಮವನ್ನು ಅದು ಆರಂಭಿಸಿದೆ ಎಂದು ವರದಿಯಾಗಿದೆ.
ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಕ್ಕೆ ಹೋಗಲಿದ್ದು ಇದಕ್ಕೆ ಪೂರ್ವಭಾವಿಯಾಗಿ ಸೌದಿ ಅರೇಬಿಯದ ಇಸ್ಲಾಮಿಕ್ ಡೆವಲಪ್‌ಮೆಂಟ್ ಬ್ಯಾಂಕ್ ಅಧಿಕಾರಿಗಳು ಭಾರತಕ್ಕೆ ಬಂದಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯದೊಂದಿಗೆ ಮಾತುಕತೆ ನಡೆಸಿ ಇಸ್ಲಾಮಿಕ್ ಬ್ಯಾಂಕಿಂಗ್‌ನ್ನು ಸ್ಪಷ್ಟಪಡಿಸುವುದು ಅವರ ಉದ್ದೇಶವಾಗಿದೆ. ಜಗತ್ತಿನಾದ್ಯಂತ ಅಂಗೀಕಾರ ಗಳಿಸಿರುವ ಆರ್ಥಿಕ ಮಾದರಿ ಇಸ್ಲಾಮಿಕ್ ಬ್ಯಾಂಕಿಂಗ್ ಆಗಿದ್ದು ಇದು ಬಡ್ಡಿ ರಹಿತ ಸಾಲ ನೀಡುತ್ತದೆ. ಇದರಿಂದ ಭಾರತ ದೂರ ನಿಲ್ಲುವುದು ಸರಿಯಲ್ಲ ಎಂದು ಸೌದಿ ಬ್ಯಾಂಕ್‌ನ ನಿಲುವು.
ಆಸ್ತಿಯನ್ನು ಆಧಾರವಾಗಿಟ್ಟು ಇಸ್ಲಾಮಿಕ್ ಬ್ಯಾಂಕ್ ಕಾರ್ಯ ನಿರ್ವಹಿಸುತ್ತವೆ. ಲಾಭಕ್ಕಿಂತಲೂ ಇಲ್ಲಿ ಮಾನವೀಯತೆಗೆ ಆದ್ಯತೆ ನೀಡಲಾಗುತ್ತದೆ. ಪರಂಪರಾಗತ ಬ್ಯಾಂಕ್‌ಗಳು ಸಾಲ ನೀಡಲು ಆದ್ಯತೆ ನೀಡುವಾಗ ಇಸ್ಲಾಮಿಕ್ ಬ್ಯಾಂಕಿಂಗ್ ಹೂಡಿಕೆಗೆ ಆದ್ಯತೆ ನೀಡುತ್ತವೆ. ಇದು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದ ವ್ಯವಸ್ಥೆಯಲ್ಲ. ಪರಂಪರಾಗತ ಬ್ಯಾಂಕಿಂಗ್ ವ್ಯವಸ್ಥೆಯಿಂದ ರಕ್ಷೆಹೊಂದಲು ಇರುವ ವ್ಯವಸ್ಥೆಯಾಗಿದೆ. ಯುಎಸ್‌ಎ, ಯುಕೆ, ಜಪಾನ್ ಮುಂತಾದ ಎಪ್ಪತ್ತಕ್ಕೂ ಅಧಿಕ ರಾಷ್ಟ್ರಗಳಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆ ಅಸ್ತಿತ್ವದಲ್ಲಿವೆ. ಜಗತ್ತಿನಾದ್ಯಂತ ಏಳುನೂರಕ್ಕೂ ಅಧಿಕ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ.
ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಾಯೋಗಿಕವಲ್ಲ ಎಂದು ರಿಸರ್ವ್ ಬ್ಯಾಂಕ್‌ನ ನಿಲುವು. ಬಡ್ಡಿಯಿಲ್ಲದೆ ಸಾಲ ಉದ್ಯಮಿಗಳಿಗೆ ನೀಡುವ ರೀತಿ ಅಂಗೀಕಾರಾರ್ಹವಲ್ಲ. ಇದರಲ್ಲಿ ಬಹಳಷ್ಟು ಕಾನೂನು ಸಮಸ್ಯೆಗಳಿವೆ ಎಂದು ಅದು ಹೇಳುತ್ತಿದೆ. ಈಗಿನಕಾನೂನು ಪ್ರಕಾರ ಇಸ್ಲಾಮಿಕ್ ಬ್ಯಾಂಕ್ ಪ್ರಾರಂಭಿಸಲು ಸಾಧ್ಯವಿಲ್ಲ. ಇದಕ್ಕಾಗಿ ಸರಕಾರ ಹೊಸಕಾನೂನು ತರಬೇಕಾದೀತು ಎಂದು ಆರ್‌ಬಿಐ ಹೇಳುತ್ತದೆ. ಈ ಪರಿಸ್ಥಿತಿಯಲ್ಲಿ ಆರ್‌ಬಿಐಯ ಮನಸು ಪರಿವರ್ತನೆಗೆ ಸೌದಿ ಬ್ಯಾಂಕ್ ಪ್ರಯತ್ನ ಆರಂಭಿಸಿದೆ. ಮೋದಿಯ ಸೌದಿ ಸಂದರ್ಶನದಲ್ಲಿ ಈ ವಿಚಾರ ಪ್ರಧಾನ ಅಜೆಂಡ ಮಾಡಬೇಕೆಂದು ಸೌದಿ ಬ್ಯಾಂಕ್ ಬಯಸುತ್ತಿದೆ. ಅದಕ್ಕಾಗಿ ಆರ್‌ಬಿಐಗೆ ವಿಷಯ ಮನದಟ್ಟು ಮಾಡಲಿಕ್ಕಾಗಿ ಅದು ಪ್ರಯತ್ನ ಆರಂಭಿಸಿದೆ.