ಇಬ್ರಾಹಿಮ್ ಹೆಸರು ಹಾಕಿದ್ದರಲ್ಲಿ ತಪ್ಪಿಲ್ಲ : ರಾಜ್ಯ ಸರಕಾರ
ಬೆಂಗಳೂರು, ಮಾ. 17: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹೀಂ ಅವರ ಹೆಸರು ಹಾಕಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟವಾಗಿ ಹೇಳಿದೆ. " ಡಿಸಿ ಯಾವುದೇ ತಪ್ಪು ಮಾಡಿಲ್ಲ. ಅವರು ಜಿಲ್ಲಾಧಿಕಾರಿಯಾಗಿ ಹಾಗೂ ಮುಜರಾಯಿ ಇಲಾಖೆಯ ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸಿದ್ದಾರೆ " ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಹೇಳಿದ್ದಾರೆ.
ದೇವಸ್ಥಾನದ ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದ ಜಿಲ್ಲಾಧಿಕಾರಿಯ ಹೆಸರು ಹಾಕಿದ್ದು ಸರಿಯಲ್ಲ . ಅದನ್ನು ತೆಗೆದು ಹೊಸ ಆಮಂತ್ರಣ ಪತ್ರಿಕೆ ಮುದ್ರಿಸಬೇಕು ಎಂದು ಸಂಘ ಪರಿವಾರದ ಸಂಘಟನೆಗಳು ಆಗ್ರಹಿಸಿದ್ದವು. ಸ್ಥಳೀಯ ಶಾಸಕಿ ಶಕುಂತಲಾ ಶೆಟ್ಟಿ ಅವರೂ ಹೊಸ ಆಮಂತ್ರಮ ಪತ್ರಿಕೆ ಮುದ್ರಿಸಲು ಸೂಚನೆ ನೀಡಿದ್ದರು. ಆದರೆ ಬಳಿಕ ತೀವ್ರ ವಿರೋಧ ವ್ಯಕ್ತವಾದ ಮೇಲೆ ತನ್ನ ಹೇಳಿಕೆಯಿಂದ ಹಿಂದೆ ಸರಿದಿದ್ದರು. ತಾನು ಶಾಂತಿಯುತ ಜಾತ್ರೆ ನಡೆಯಲು ಬಯಸಿದ್ದೇನೆ ಎಂದು ಅವರು ಹೇಳಿದ್ದರು. ಈಗ ಅವರದೇ ಪಕ್ಷದ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೆಸರು ಹಾಕಿದ್ದರಲ್ಲಿ ತಪ್ಪಿಲ್ಲ ಎಂದಿರುವುದು ಅವರಿಗೆ ತೀವ್ರ ಮುಜುಗರ ಉಂಟಾಗಿದೆ.