ಇಬ್ಬರು ಪುತ್ರಿಯರ ಕತ್ತು ಕೊಯ್ದು ಹತ್ಯೆಗೈದ ಮಹಿಳೆ
ಹೈದರಾಬಾದ್,ಮಾ.17: ತನ್ನ ಪತಿ ಹಿರಿಯ ಪುತ್ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಶಂಕಿಸಿದ್ದ ಮಹಿಳೆಯೋರ್ವಳು ತನ್ನಿಬ್ಬರು ಪುತ್ರಿಯರನ್ನು ಕತ್ತು ಸೀಳಿ ಹತ್ಯೆಗೈದಿರುವ ಬರ್ಬರ ಘಟನೆ ಇಲ್ಲಿಯ ತುಕಾರಾಂ ಗೇಟ್ ಪೊಲೀಸ್‌ಠಾಣಾ ವ್ಯಾಪ್ತಿಯ ಟೀಚರ್ಸ್ ಕಾಲನಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಅಶ್ವಿತಾ(8) ಮತ್ತು ತವಿಷ್ಕಾ(3) ಅವರ ಕತ್ತುಗಳನ್ನು ಗಾಜಿನ ತುಂಡಿನಿಂದ ಕೊಯ್ದು ಕೊಲೆ ಮಾಡಿರುವ ರಜನಿ(41) ಪೊಲೀಸರಿಗೆ ಶರಣಾಗಿ,ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.
ಅಶ್ವಿತಾ ತನ್ನ ತಂದೆಯನ್ನು ಕಂಡರೆ ತುಂಬ ಹೆದರಿಕೊಳ್ಳುತ್ತಿದ್ದಳು. ಇದು ಪತಿ ವಿಜಯ ಕಳೆದ ಕೆಲವು ತಿಂಗಳುಗಳಿಂದ ಅಶ್ವಿತಾಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆಂಬ ರಜನಿಯ ಶಂಕೆಯನ್ನು ಇನ್ನಷ್ಟು ಬಲಗೊಳಿಸಿತ್ತು, ಈ ವಿಷಯವಾಗಿ ಆತನೊಡನೆ ಜಗಳವನ್ನೂ ಮಾಡಿದ್ದಳು. ಆದರೆ ಆತ ಈ ಆರೋಪವನ್ನು ನಿರಾಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ಸಂದರ್ಭದಲ್ಲಿ ವಿನಯನನ್ನು ವಿಚಾರಣೆಗೊಳಪಡಿಸಿದ ಪೊಲೀಸರು ಆತನ ವಿರುದ್ದ ರಜನಿಯ ಆರೋಪಕ್ಕೆ ಯಾವುದೇ ಸಾಕ್ಷಾಧಾರಗಳು ಸದ್ಯಕ್ಕೆ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.