ಮೂಡುಬಿದಿರೆ : ವಸತಿ ಸಮುಚ್ಛಯದಲ್ಲಿ ನೀರಿನ ವಿವಾದ, ಇತ್ಯರ್ಥಗೊಳಿಸಲು ವಾರದ ಗಡುವು
ಮೂಡುಬಿದಿರೆ: ವಸತಿ ಸಮುಚ್ಛವೊಂದರಲ್ಲಿ ನೀರಿಗೆ ಸಂಬಂಧಿಸಿದ ವಿಚಾರಕ್ಕೆ ವಿವಾದ ಉಂಟಾಗಿ ಫ್ಲಾಟ್‌ಗೆ ಬರುವ ಎರಡು ನೀರಿನ ಸಂಪರ್ಕವನ್ನು ಕಡಿತಗೊಳಿಸಿದ ಘಟನೆ ಗುರುವಾರ ಅಮರಶ್ರೀ ಟಾಕೀಸಿನ ಬಳಿ ನಡೆದಿದೆ.
ವಸತಿಸಮುಚ್ಚಯ ಸಂಘದ ಮಾಜಿ ಅಧ್ಯಕ್ಷರ ಫ್ಲಾಟ್‌ಗೆ ಪುರಸಭೆ ನೀರಿನ ಸಂಪರ್ಕ ಕಲ್ಪಿಸಲು ಪ್ರತ್ಯೇಕ ನೀರಿನ ಟ್ಯಾಂಕ್ ಇಡಲಾಗಿತ್ತು. ಈ ಸಂಪರ್ಕ ವಸತಿ ಸಮುಚ್ಚಯ ಸಂಘದ ಮಾಜಿ ಅಧ್ಯಕ್ಷ ನಾಗೇಶ್ ಎಂಬವರ ಹೆಸರಿನಲ್ಲಿತ್ತೆನ್ನಲಾಗಿದ್ದು ಈ ರೀತಿ ಪ್ರತ್ಯೇಕವಾಗಿ ಟ್ಯಾಂಕ್ ಇಟ್ಟು ನೀರು ಬಳಕೆ ಮಾಡುತ್ತಿರುವುದಕ್ಕೆ ಉಳಿದ ಫ್ಲ್ಯಾಟ್‌ನವರು ಆಕ್ಷೇಪ ಎತ್ತಿದ್ದರು. ನೀರಿನ ಅಭಾವ ಉಂಟಾದ ಹಿನ್ನೆಲೆಯಲ್ಲಿ ಗುರುವಾರ ವಿವಾದ ವಿಕೋಪಕ್ಕೇರಿ ಅಲ್ಲಿದ್ದ ಇತರ ಫ್ಲ್ಯಾಟ್‌ನವರು ಸೇರಿ ಸದ್ರಿ ನೀರಿನ ಟ್ಯಾಂಕ್‌ನ ಸಂಪರ್ಕವನ್ನು ತುಂಡರಿಸಿದರಿಂದ ಸಂಘದ ಮಾಜಿ ಅಧ್ಯಕ್ಷರ ಮನೆಗೆ ಹೋಗುವ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಇದಕ್ಕೆ ಪ್ರತಿಯಾಗಿ ಕೆಳಗಡೆಯಿಂದ ಸಮುಚ್ಚಯಕ್ಕೆ ಬರುವ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದಾರೆಂಬ ಆರೋಪ ಮಾಜಿ ಅಧ್ಯಕ್ಷರ ಮೇಲೆ ಕೇಳಿಬಂದಿದೆ.
ಕೆಳಗಡೆ ಮತ್ತೊಂದು ಪ್ರತ್ಯೇಕ ಟ್ಯಾಂಕ್ ಇಟ್ಟು ಪಂಪ್ ಮೂಲಕ ತನ್ನ ಮನೆಗೆ ಅವರು ನೀರು ಪೂರೈಸುತ್ತಿದ್ದರೆನ್ನಲಾಗಿದೆ. ಸಮುಚ್ಚಯದವರು ನೀರಿನ ಬಿಲ್ ಬಾಕಿಯಿಟ್ಟಿದ್ದರಿಂದ ಈ ರೀತಿ ಮಾಡಲಾಗಿದೆ ಅಲ್ಲದೆ ಸಂಕೀರ್ಣದ ಮಾಲೀಕರ ಒಪ್ಪಿಗೆ ಪಡೆದು ಇನ್ನೊಂದು ಟ್ಯಾಂಕನ್ನು ಇಡಲಾಗಿದೆ ಎಂದು ಮಾಜಿ ಅಧ್ಯಕ್ಷರು ತಿಳಿಸಿದ್ದಾರೆ. ಒಂದು ವಾರ ಗಡುವು: ಪೊಲೀಸ್ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಗುರುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಎರಡು ಕಡೆಯವರ ಜತೆ ಮಾತುಕತೆ ನಡೆಸಿದರು. ಸಂಕೀರ್ಣದ ಮಾಲಿಕರನ್ನು ಕರೆಸಿ ಮಾತುಕತೆ ನಡೆಸಿ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಿಕೊಳ್ಳಿ, ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದು ನೀರಿನ ಸಂಪರ್ಕ ಮರುಜೋಡಣೆಗೆ ಸೂಚಿಸಿದ್ದಾರೆ.