ದೇಶದ್ರೋಹಿ ಪಟ್ಟ ಕಟ್ಟಲು ಗಾಂಧೀಜಿಯವರನ್ನು ಕೊಂದವರಿಗೆ ಮಾತ್ರ ಸಾಧ್ಯ - ಪ್ರೊ. ರವಿವರ್ಮ ಕುಮಾರ್
ಮಂಗಳೂರು, ಮಾ. 17: ಮಹಾತ್ಮಾ ಗಾಂಧೀಜಿ, ಭಗತ್‌ಸಿಂಗ್ ನೇಣಿಗೇರಿದ ಮಣ್ಣಿನಲ್ಲಿ ಪ್ರಜಾತಂತ್ರದ ಉಳಿವಿಗಾಗಿ ಹೋರಾಡುವವರನ್ನು ದೇಶದ್ರೋಹಿ ಎಂದು ಪಟ್ಟ ಕಟ್ಟಲು ಮಹಾತ್ಮ ಗಾಂಧೀಜಿಯವರನ್ನು ಕೊಂದವರಿಗೆ ಮಾತ್ರ ಸಾಧ್ಯ ಎಂದು ಕರ್ನಾಟಕದ ಮಾಜಿ ಅಡ್ವಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಹೇಳಿದರು. ನಗರದ ರವೀಂದ್ರ ಕಲಾಭವನದಲ್ಲಿ ಇಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು, ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಂಶೋಧನ ಕೇಂದ್ರ ಉಡುಪಿ, ಪುತ್ತೂರಿನ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಹೆಜ್ಜೆಯ ಜಾಡಿನಲ್ಲಿ ಜತ್ತಪ್ಪ ರೈ ಜೀವನಗಾಥೆ ಹಾಗೂ ಗಾಂಧಿ ವಿಚಾರಧಾರೆ ಸಾರ್ವಕಾಲಿಕ ರಾಜಕೀಯ ಒಂದು ಪವಿತ್ರ ಸೇವೆ ಎಂಬ ವಿಚಾರಸಂಕಿರಣ ಹಾಗೂ ಕುಂಬ್ರ ಜತ್ತಪ್ಪ ರೈ ಜೀವನಗಾಥೆ ಎಂಬ ಕೃತಿ ಬಿಡುಗಡೆ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣದಲ್ಲಿ ಮಾತನಾಡಿದರು.
ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ನಿರ್ಬಂಧ ವಿಧಿಸಿದರೆ ಅದು ಹಿಂಸಾಚಾರಕ್ಕೆ ಎಡೆ ಮಾಡುತ್ತದೆ. ಪ್ರಜಾತಂತ್ರವು ಉಳಿಯಬೇಕಾದರೆ ಪ್ರಜಾತಂತ್ರಕ್ಕೆ ಮಾರಕವಾಗುವ ಹೆಜ್ಜೆಗಳಿಗೆ ಕೇಂದ್ರ ಸರಕಾರ ಅವಕಾಶ ನೀಡಬಾರದು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ ತಡೆಗೆ ಅವಕಾಶ ನೀಡಬಾರದು. ದೇಶದಲ್ಲಿ ನ್ಯಾಯ ,ಸತ್ಯ ಉಳಿಯಬೇಕು , ಭ್ರಷ್ಠಾಚಾರ ತೊಡೆದುಹಾಕಬೇಕಾಗಿದೆ . ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿ ಅಲ್ಲಿನ ವಿದ್ಯಾರ್ಥಿಗಳು ನಂಬಿದ ಸಿದ್ದಾಂತಕ್ಕೆ ಸಂಬಂಧಿಸಿ ಚರ್ಚೆಗಳು, ಸೆಮಿನಾರ್‌ಗಳು ನಡೆಯುತ್ತಲೆ ಇರುತ್ತದೆ. ಅನಿಯಮಿತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ನೀಡಬೇಕಾಗಿದೆ. ದಲಿತ ವಿದ್ಯಾರ್ಥಿಗಳ ಮೇಲೆ ದಲಿತ ನಿಂದನೆಗಳು ವಿಶ್ವವಿದ್ಯಾನಿಲಯದಲ್ಲಿ ಆಗುತ್ತಲೆ ಇದೆ. 23 ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದಾಖಲೆಗಳನ್ನು ಸರಕಾರಕ್ಕೆ ನೀಡುತ್ತೇನೆ. ಇದರ ಬಗ್ಗೆ ಕೇಂದ್ರ ಸರಕಾರ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಗಾಂಧಿಜೀಯ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕು,ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ವಿಚಾರಗಳ ಮಂಥನ ನಡೆಯಬೇಕು. ಎಲ್ಲಾ ಸಿದ್ದಾಂತಗಳ, ಪ್ರಜಾಪ್ರಭುತ್ವ ವೌಲ್ಯ ಎತ್ತಿ ಹಿಡಿಯುವ ಚರ್ಚೆ ನಡೆಯಬೇಕು ಎಂದು ಹೇಳಿದರು.
ವಿಶ್ವವಿದ್ಯಾನಿಲಯದಲ್ಲಿ ಪ್ರಜಾಪ್ರಭುತ್ವ ವೌಲ್ಯ ದೊಡ್ಡದು. ಪ್ರಜಾಪ್ರಭುತ್ವ ಇರುವುದೆ ವಿದ್ಯಾರ್ಥಿಗಳಿಗೋಸ್ಕರ . ವಿದ್ಯಾರ್ಥಿಗಳಿನ್ನು ರಾಜಕೀಯ ವ್ಯವಸ್ಥೆಗೆ , ಭ್ರಷ್ಟ ಕೆಲಸಕ್ಕೆ ಕೈ ಹಾಕದಿರುವವರು. ಅವರಿಗೆ ಎಲ್ಲಾ ವಿಚಾರಗಳು ತಿಳಿದಿರಬೇಕು ಎಂದು ಹೇಳಿದರು.
ನಮ್ಮ ದೇಶದಲ್ಲಿ ಗಾಂಧೀಜಿಗೆ ಬುದ್ದನ ಸ್ಥಿತಿ ಬಂದಿದೆ. ಭಾರತದಲ್ಲಿ ಹುಟ್ಟಿದ ಬುದ್ದನನ್ನು ಭಾರತೀಯರು ಮರೆತಿದ್ದಾರೆ. ಇಡೀ ವಿಶ್ವವೆ ಬುದ್ದನನ್ನು ನೆನಪಿಸಿಕೊಳ್ಳುತ್ತಿದೆ. ಗಾಂಧೀಜಿಗೆ ಕೂಡ ಭಾರತದಲ್ಲಿ ಅದೇ ಸ್ಥಿತಿ ಬಂದಿದೆ. ಗಾಂಧಿಯನ್ನು ಕೊಂದವರು ನಾವೆ. ಗಾಂಧಿಯನ್ನು ಮರೆತವರು ನಾವೆ ಆಗಿದ್ದೇವೆ. ಶಿಕ್ಷಣದಲ್ಲಿ ಗಾಂಧೀಜಿಯನ್ನು ಅಳವಡಿಸಿಕೊಳ್ಳದೆ ಇದ್ದರೆ ಗಾಂಧೀಜಿಯನ್ನು ಪ್ರತಿಷ್ಠಾಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಗಾಂಧೀಜಿ ,ನೆಲ್ಸನ್ ಮಂಡೇಲಾ ಕ್ರಿಮಿನಲ್‌ಗಳಲ್ಲ, ಅವರು ಸ್ವಾತಂತ್ರ ಹೋರಾಟಗಾರರು ಎಂಬುದು ತಿಳಿದಿರಬೇಕು . ಇಂದು ನಾವು ಚುನಾಯಿಸಿ ಎರಡೆರಡು ಬಾರಿ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿದ ವಿಜಯ್ ಮಲ್ಯ ಸಾವಿರಾರು ಕೋಟಿಯೊಂದಿಗೆ ದೇಶದಿಂದ ಪಲಾಯನಗೈದಿದ್ದಾರೆ. ಹಣವಿಲ್ಲದೆ, ಹೆಂಡವಿಲ್ಲದೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಬಂದಿದೆ.ಮತದಾರರೆ ಭ್ರಷ್ಟರಾದ ಪರಿಣಾಮ ಈ ರೀತಿಯಾಗುತ್ತದೆ ಎಂದು ಹೇಳಿದರು.
ಜತ್ತಪ್ಪ ರೈಗಳು ರಾಜಕೀಯದಲ್ಲಿ ,ಸಾಮಾಜಿಕ, ಆರ್ಥಿಕ ಜೀವನದಲ್ಲಿ ಯಾವ ಸಂದರ್ಭದಲ್ಲಿಯೂ ತಮ್ಮ ಸಿದ್ದಾಂತದಲ್ಲಿ ರಾಜೀ ಮಾಡಿಕೊಂಡವರಲ್ಲ. ತಾವು ನಂಬಿದ ವೌಲ್ಯಗಳಿಗೆ ಬದ್ದರಾಗಿ ಕೆಲಸವನ್ನು ಮಾಡಿದವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನಮ್ಮ ದೇಶದಲ್ಲಿ ಪ್ರಾಮಾಣಿಕತೆ, ಸಮಗ್ರತೆ ಮೂಲತತ್ವವಾಗಿದ್ದರೆ ಇದೀಗ ಸಾಮರ್ಥ್ಯ ತೋರ್ಪಡಿಸುವಿಕೆ ಸೇರಿದೆ. ಭಾರತ ಮಾತಕೀ ಎಂಬ ಘೋಷನೆಯನ್ನು ಗಾಂಧೀಜಿ ಕೊಟ್ಟರು. ಆದರೆ ಇದನ್ನು ಹೇಳದವರು ಇಂದು ಪಾರ್ಲಿಮೆಂಟಿನಲ್ಲಿದ್ದಾರೆ. ಅವುಗಳಿಗೆ ಉತ್ತರ ಕೊಡುವ ಸಮಾಜ ನಿರ್ಮಾಣವಾಗಬೇಕಾಗಿದೆ ಎಂದು ಹೇಳಿದರು.ನಮಗೂ ನಮ್ಮ ದೇಶಕ್ಕೆ ಇರುವ ಭಾವನಾತ್ಮಕಾ ಸಂಬಂಧ ಮರೆತು ಹೋಗಿದೆ. ಸಾಮಾಜಿಕ ವಿಚಾರದ ಬದಲಿಗೆ ಸ್ವಾರ್ಥ ತುಂಬಿಕೊಂಡಿದೆ.ನೂರಾರು ಸವಾಲುಗಳನ್ನು ಎದುರಿಸುವ ಸಂದರ್ಭದಲ್ಲಿದ್ದೇವೆ. ಸಮಾಜದ ಸವಾಲಿಗೆ ಸತ್ಯದ ಮೂಲಕ ಉತ್ತರ ಕಂಡುಹಿಡಿಯಬೇಕಾಗಿದೆ . ಇವತ್ತು ಪ್ರೀತಿ ವಿಶ್ವಾಸಕ್ಕೆ ಕೊರತೆ ಇದೆ. ನಡೆದದ್ದೆ ದಾರಿ ಎಂಬಂತಾಗಿದೆ ಎಂದು ಹೇಳಿದರು.
ಭಾರತ ದೇಶ ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಜಗತ್ತಿನ ಮುಂದೆ ಅಸ್ತಿತ್ವಕ್ಕೆ ಪರದಾಡಬೇಕಾದ ಪರಿಸ್ಥಿತಿಯಿದೆ. ರಾಜಕೀಯ ಇಷ್ಷಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ರಾಜಕೀಯ ಸಂಘರ್ಷಗಳು ವಿಭಜನೆಯ ಹಾದಿ ಹಿಡಿಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ವಿನಯ್ ಹೆಗ್ಡೆ ಹಕ್ಕು ಸಂವಿಧಾನಕ್ಕಿಂತ ದೊಡ್ಡದು. ಅದಕ್ಕೆ ನಿರ್ಬಂಧವಿದ್ದು ಅದಕ್ಕೆ ತಕ್ಕಂತೆ ವರ್ತಿಸಬೇಕು . ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೀಸಲಾತಿಯಿಂದ ಬಂದ ವಿದ್ಯಾರ್ಥಿಗಳಲ್ಲಿ ಪ್ರಸಕ್ತ ಶಿಕ್ಷಣವನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಬೆಂಬಲವನ್ನು ರೂಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾಹಿತಿ ಏರ್ಯಲಕ್ಷ್ಮೀನಾರಯಣ ಆಳ್ವ, ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಉದಯ್‌ಕುಮಾರ್, ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಸಂಚಾಲಕ ಇಳಂತಾಜೆ ಪ್ರಮೋದ್ ಕುಮಾರ್ ರೈ ಉಪಸ್ಥಿತರಿದ್ದರು.