ಎತ್ತಿನಹೊಳೆ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಂಕೇತಿಕ ಉಪವಾಸ ಸತ್ಯಾಗ್ರಹ
ಮಂಗಳೂರು,ಮಾ.17:ಎತ್ತಿನಹೊಳೆ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಆಶ್ರಯದಲ್ಲಿ ಇಂದು ದ.ಕ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಯಿತು.
ಉಪವಾಸ ಸತ್ಯಾಗ್ರಹ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಕೇಮಾರು ಮಠಾಧೀಶ ಈಶ ವಿಠಲದಾಸ ಸ್ವಾಮೀಜಿ ಅವರು ತುಳುನಾಡಿನ ನೆಲವನ್ನು ಕಸಿದುಕೊಳ್ಳುವ ಹುನ್ನಾರವನ್ನು ಸರಕಾರ ಮತ್ತು ಬಂಡವಾಳಶಾಹಿಗಳು ಮಾಡುತ್ತಿದ್ದಾರೆ. ಜಿಲ್ಲೆಯನ್ನು ಬರಡು ಮಾಡುವ ಹುನ್ನಾರದ ವಿರುದ್ಧ ಜಿಲ್ಲೆಯ ಜನತೆ ಜಾತಿ,ಧರ್ಮ ಭೇದವಿಲ್ಲದೆ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಫಾ.ವಿಲಿಯಂ ಕ್ರಾಸ್ತ ಎತ್ತಿನಹೊಳೆ ಯೋಜನೆ ವಿರುದ್ಧ ನಿರಂತರ ಹೋರಾಟ ನಡೆಯಬೇಕು. ಹೋರಾಟಕ್ಕೆ ಮಂಗಳೂರು ಕೆಥೋಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯದ ಬೆಂಬಲವಿದೆ ಎಂದು ಹೇಳಿದರು.
ಪ್ರತಿಭಟನೆಯ ಸಭೆಯಲ್ಲಿ ಮಾತನಾಡಿದ ಮನಪಾ ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ಮಾತನಾಡಿ ಜಿಲ್ಲೆಯ ಹೆಚ್ಚಿನ ರಾಜಕಾರಣಿಗಳು ಮುಂದಿನ ಚುನಾವಣೆಯನ್ನು ನೋಡುತ್ತಿದ್ದಾರೆ.ಮುಂದಿನ ಜನಾಂಗದ ಬಗ್ಗೆ ಯೋಚನೆಯಿಲ್ಲದೆ ಇರುವುದರಿಂದ ಇಂತಹ ಯೋಜನೆಗಳು ಆಗುತ್ತಿದೆ. ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವ ನಾನು ಇದಕ್ಕಾಗಿ ಯಾವುದೆ ಹುದ್ದೆ ತ್ಯಾಗಕ್ಕೂ ಸಿದ್ಧನಿದ್ದೇನೆ . ಸರಕಾರ ಎತ್ತಿನಹೊಳೆ ಯೋಜನೆ ಕೈಬಿಡಬೇಕು, ನೇತ್ರಾವತಿ ನದಿ ಪ್ರಾಧಿಕಾರ ರಚಿಸಬೇಕು, ಕರಾವಳಿ ಸಮಗ್ರ ನೀರಾವರಿ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಸಭೆಯನ್ನುದ್ದೇಶಿಸಿ ಮಾತನಾಡಿದ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಮುಖಂಡ ಎಂ.ಜಿ.ಹೆಗ್ಡೆ ಕರಾವಳಿ ಜಿಲ್ಲೆಯವರನ್ನು ಆಖಂಡ ಕರ್ನಾಟಕದ ಭಾಗವಾಗಿ ಪ್ರೀತಿ, ವಿಶ್ವಾಸ, ಗೌರವದಿಂದ ನೋಡಿದರೆ ನಾವು ಅಖಂಡ ಕರ್ನಾಟಕದಲ್ಲಿ ಇರಬಹುದು. ಇಲ್ಲದಿದ್ದರೆ ನಮಗೆ ಪ್ರತ್ಯೇಕ ರಾಜ್ಯ ಮಾಡಲು ಗೊತ್ತಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಮನಪಾ ಉಪಮೇಯರ್ ಸುಮಿತ್ರಾ ಕರಿಯ, ಬಿಜೆಪಿ ಮುಖಂಡ ಜಗದೀಶ ಅಧಿಕಾರಿ, ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಮುಖಂಡರುಗಳಾದ ರಾಮಚಂದ್ರ ಬೈಕಂಪಾಡಿ, ಯೊಗೀಶ್ ಶೆಟ್ಟಿ ಜೆಪ್ಪು, ರವೀಂದ್ರ, ರವಿಶಂಕರ್, ಜ್ಯೋತಿಕಾ ಜೈನ್, ಇಬ್ರಾಹಿಂ, ದಿನಕರ ಶೆಟ್ಟಿ, ಲ್ಯಾನ್ಸಿ, ಮೀರಾ ಕರ್ಕೇರಾ,ನವೀನ್ , ವಾಸುದೇವ ಬೋಳೂರು, ಸಂಜೀವ್ ಶೆಟ್ಟಿ, ಅಕ್ಷಿತ್ ಸುವರ್ಣ, ಪ್ರಶಾಂತ್ ರಾವ್ ಕಡಬ, ಸಿರಾಜ್ ಅಡ್ಕರೆ ಮೊದಲಾದವರು ಭಾಗವಹಿಸಿದರು.