ಎಪಿಟೋಮ್ -2016, ರಾಷ್ಟ್ರಮಟ್ಟದ ಅಂತರ್ ಕಾಲೇಜು ಮಾಹಿತಿ ತಂತ್ರಜ್ಞಾನ ಸ್ಪರ್ಧೆಯನ್ನು ಉದ್ಘಾಟನೆ
ಉಳ್ಳಾಲ: ಜಗತ್ತು ಡಿಜಿಟಲೀಕರಣವಾಗಿ ಬದಲಾಗುತ್ತಿದ್ದು, ಡಿಜಿಟಲ್ ತಂತ್ರಜ್ಞಾನಗಳು ವಿಶ್ವದ ಮುಖವನ್ನೇ ಬದಲಾಯಿಸುತ್ತಿದ್ದರೂ ಮನುಷ್ಯ ಮಾನವೀಯತೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಮಂಗಳೂರಿನ ಬಿಷಪ್ ರೆ. ಫಾದರ್ ಅಲೋಷಿಯಸ್ ಪಾವ್ಲ್ ಡಿಸೋಜಾ ಅಭಿಪ್ರಾಯಪಟ್ಟರು ಅವರು ಬೀರಿ ಮಾಡೂರಿನ ಸಂತ ಅಲೋಷಿಯಸ್ ಕಾಲೇಜಿನ ಮಾಹಿತಿ ತಂತ್ರಜ್ಞಾನ ಶಾಲೆ ಮತ್ತು ಬಯೋ ಇನ್ಫಾರ್ಮೇಟಿಕ್ಸ್ ವಿಭಾಗ ಗುರುವಾರ ಕ್ಯಾಂಪಸ್ಸಿನ ಅರ್ತೂರು ಶೀಣೈ ಆಡಿಟೋರಿಯಂನಲ್ಲಿ ಹಮ್ಮಿಕೊಂಡ ಎಪಿಟೋಮ್ -2016 ರಾಷ್ಟ್ರಮಟ್ಟದ ಅಂತರ್ ಕಾಲೇಜು ಮಾಹಿತಿ ತಂತ್ರಜ್ಞಾನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾಹಿತಿ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನಗಳು ಆವರಿಸಿ ಜಗತ್ತು ಅಭಿವೃದ್ಧಿ ಪಥದಲ್ಲಿದೆ. ಆದರೆ ಬದುಕಿನ ಮೂಲ ಆಗಿರುವ ಮಾನವೀಯತೆ, ಸಂಬಂಧಗಳು ಮರೆಯಾಗುತ್ತಿವೆ. ಸಮಾಜದಲ್ಲಿ ಉತ್ತಮ ಜೀವನ ನಿರ್ವಹಿಸಲು ಮಾನವೀಯ ಮೌಲ್ಯಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಉತ್ತಮ ಮನುಷ್ಯನೆನಿಸಲು ಉತ್ತಮ ಗುಣನಡತೆ ಜ್ಞಾನದ ಹಸಿವು, ಘನತೆಯ ದೃಷ್ಟಿಯನ್ನು ಪ್ರದರ್ಶಿಸುವಿಕೆ, ಭಾವನೆಗಳನ್ನು ಬೆಳೆಸಿ, ತಾಳ್ಮೆ, ಗುರಿ, ಒಳ್ಳೆಯ ಗೆಳೆಯರು, ತ್ಯಾಗ, ಧನಾತ್ಮಕ ಚಿಂತನೆಗಳು, ಕುಟುಂಬವನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಬೇಕು ಎಂದರು. ಸಂತ ಅಲೋಷಿಯಸ್ ಕಾಲೇಜಿನ ಪ್ರಾಂಶುಪಾಲ ಫಾ.ಸ್ವೀಬರ್ಟ್ ಡಿಸಿಲ್ವಾ ಮಾತನಾಡಿ ರಾಷ್ಟ್ರಮಟ್ಟದ ಉತ್ತಮ ಶಾಲೆಗಳಲ್ಲಿ ಸಂತ ಅಲೋಷಿಯಸ್ ಕಾಲೇಜು 2ನೇ ಸ್ಥಾನದಲ್ಲಿದೆ. ಜಗತ್ತಿನ 146 ಸ್ಟಾರ್ ಕಾಲೇಜುಗಳಲ್ಲಿ ಅಲೋಷಿಯಸ್ ಕಾಲೇಜು ಒಂದಾಗಿದೆ. ಇದು ಸಿಬ್ಬಂದಿ ಮಾತ್ರವಲ್ಲ ಕಾಲೇಜುಗಳಲ್ಲಿ ವ್ಯಾಸಾಂಗ ನಡೆಸಿ ಉನ್ನತ ಸ್ಥಾನವನ್ನೇರಿದ ವಿದ್ಯಾರ್ಥಿಗಳಿಂದ ಸಾಧ್ಯವಾಗಿದೆ. ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯ ಅಲೋಷಿಯಸ್ ಕಾಲೇಜಿನಿಂದ ಆಗಿರುವುದರಿಂದ ಯಶಸ್ಸು ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಅಲೋಷಿಯಸ್‌ನ ರೆಕ್ಟರ್ ಫಾ.ಡೆನ್ಝಿಲ್ ಲೋಬೊ ವಹಿಸಿದ್ದರು. ಆಡಳಿತಾಧಿಕಾರಿ ಪ್ರದೀಪ್ ಸಿಕ್ವೇರಾ , ಮಿಥುನ್ ಡಿಸೋಜಾ, ವಿದ್ಯಾರ್ಥಿ ಸಂಘಟಕರಾದ ಸಂದೇಶ್ ಶೆಟ್ಟಿ, ವಿನೀತ್ ಲಸ್ರಾದೋ ಉಪಸ್ಥಿತರಿದ್ದರು
ಮಾಹಿತಿ ತಂತ್ರಜ್ಞಾನ ವಿಭಾಗದ ಡೀನ್ ಪ್ರೊ. ಸಂತೋಷ್ ರೆಬೆಲ್ಲೋ ಸ್ವಾಗತಿಸಿದರು. ಎನೋಲಾ ಕಾರ್ಯಕ್ರಮ ನಿರ್ವಹಿಸಿದರು. ರೋಷನ್ ಸುವಾರೀಸ್ ವಂದಿಸಿದರು.